ಹೊಸ ದಿಗಂತ ವರದಿ, ಧಾರವಾಡ:
ನನ್ನ ತಂದೆ ಯಡಿಯೂರಪ್ಪರು ಮುಖ್ಯಮಂತ್ರಿ ಅವಧಿ ಪೂರ್ಣಗೊಳಿಸುತ್ತಾರೆ. ತಂದೆ ಎನ್ನುವ ಅಭಿಮಾನದಿಂದ ಈ ಮಾತು ಹೇಳುತ್ತಿಲ್ಲ. ಓರ್ವ ಸಮಾನ್ಯ ಮಹಿಳೆಯಾಗಿ ಹೇಳುತ್ತಿರುವೆ. ಅವರು ಸಿಎಂ ಆಗಿದ್ದ ನಮ್ಮೆಲ್ಲರ ಸೌಭಾಗ್ಯ ಎಂದು ಬಿಎಸ್ವೈ ಪುತ್ರಿ ಅರುಣಾದೇವಿ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಸಿಎಂ ಆಗಿರುವುದು ನಮ್ಮ ಅದೃಷ್ಟ. ಆ ಅದೃಷ್ಟ ನಮ್ಮಿಂದ ಕೈಕೊಟ್ಟರೆ ಏನೂ ಮಾಡಲಾಗದು. ಅವರು ಸಿಎಂ ಅವಧಿ ಪೂರ್ಣಗೊಳಿಸಲ್ಲ ಎಂಬುದು ಕೇವಲ ವಂದತಿ ಅಷ್ಟೇ ಎಂದು ಸ್ಪಷ್ಟಪಡಿಸಿದರು.
ತಂದೆಯರು ಕೌನ್ಸಲರ್, ಶಾಸಕರು ಇದ್ದಾಗಿನಿಂದಲೂ ಇಂಥವುಗಳನ್ನೆಲ್ಲ ಎದುರಿಸುತ್ತಾ ಬಂದಿದ್ದಾರೆ. ಈಗ ಮುಖ್ಯಮಂತ್ರಿ ಆಗಿದ್ದಾರೆ. ಯಾರೋ ಹೇಳಿದ್ದಾರೆಂಬ ಮಾತ್ರಕ್ಕೆ ಅವರು ಅಳಕು-ಅಂಜಿ ನಡೆಯುವಂತಹ ಜಾಯಾಮಾನದ ವ್ಯಕ್ತಿಗಳೇ ಅಲ್ಲ ಎಂದು ಹೇಳಿದರು.
ಅವರು ಯಾರ ಭಯವೂ ಇಲ್ಲದೆ, ನೆಮ್ಮದಿಯಿಂದ ಕೆಲಸ ಮಾಡುತ್ತಿದ್ದಾರೆ. ಕೋವಿಡ್-19, ಪ್ರವಾಹ ಸಂದರ್ಭ ಸಮರ್ಥವಾಗಿ ಎದುರಿಸಿದ್ದಾರೆ. ಸಾಮಾನ್ಯ ಜನರು ಪಕ್ಷಾತೀತವಾಗಿ ಯಡಿಯೂರಪ್ಪ ಅವರನ್ನು ಬಹಳಷ್ಟು ಪ್ರೀತಯಿಂದ ಕಾಣುತ್ತಾರೆ ಎಂದರು.
ಪಕ್ಷದ ಆಂತರಿಕ ವಿಷಯಗಳ ಬಗ್ಗೆ ನನಗೆ ಜ್ಞಾನವಿಲ್ಲ. ಆದರೆ, ಮುಖ್ಯಮಂತ್ರಿಗಳ ಅವಧಿ ಪೂರ್ಣಗೊಳಿಸುವ ಸಂಪೂರ್ಣ ವಿಶ್ವಾಸವಿದೆ. ಯಡಿಯೂರಪ್ಪ ಅವರು ಮೇರು ಪರ್ವತ ಇದ್ದಂತೆ. ಅವರಿಗೆ ಅವರೇ ಸಾಟಿ. ಬೇರೆ ಯಾರು ಅಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಭ್ರಷ್ಟಾಚಾರ ಆರೋಪಕ್ಕೆ ಪ್ರತಿಕ್ರಯಿಸಿದ ಅವರು, ತಂದೆ ಹಾಗೂ ವಿಜಯೇಂದ್ರ ಅವರಿಗೆ ಬೇಕಾದ ಉತ್ತರ ಕೊಟ್ಟಿದ್ದಾರೆ. ಸಾಮಾನ್ಯ ಜನರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಾರೆ. ಪುನಃ ಪಾಠ ಕಲಿಸುತ್ತಾರೆ ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದರು.