ಧಾರವಾಡ: ಕೊರೋನಾ-ಅತಿವೃಷ್ಟಿ ಸಂಕಷ್ಟದಲ್ಲೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರು ಉತ್ತಮ ಕೆಲಸ ಮಾಡಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳ ಬದಲಾವಣೆ ಮಾಧ್ಯಮಗಳ ಹಾಗೂ ರಾಜ್ಯದ ಜನರ ತಪ್ಪು ಕಲ್ಪನೆ ಎಂದು ಶಾಸಕ ಅರವಿಂದ ಬೆಲ್ಲದ ಸ್ಪಷ್ಟಪಡಿಸಿದರು.
ಭಾನುವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸಂದಿಗ್ಧ ಪರಿಸ್ಥಿತಿಯಲ್ಲಿ ಅತ್ಯುತ್ತಮ ಕೆಲಸ ಮಾಡಿದ ಯಡಿಯೂರಪ್ಪರ ಆಡಳಿತಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಿಎಂ ಬದಲಾವಣೆ ಬಗ್ಗೆ ಜನರಿಗೆ ತಪ್ಪು ತಿಳುವಳಕೆ ನೀಡಿದಂತೆ ಮಾಧ್ಯಮಗಳಿಗೆ ಕೋರಿದರು.
ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಆಕಾಂಕ್ಷೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆಕಾಂಕ್ಷಿಗಳು ಬಹಳಿಷ್ಟಿದ್ದಾರೆ. ಪ್ರಸಕ್ತ ಪಕ್ಷ ನನಗೆ ಶಾಸಕ ಸ್ಥಾನದ ಜೊತೆಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಿದೆ. ನಮ್ಮ ಪಕ್ಷ ನೀಡಿದ ಯಾವುದೇ ಜವಾಬ್ದಾರಿ ಪ್ರಾಮಾಣಿಕ ಮಾಡುವುದಾಗಿ ಹೇಳಿದರು.
ಶಾಸಕರಾದ ಎಲ್ಲರಿಗೂ ಸಚಿವರಾಗುವ ಆಸೆ ಇರುತ್ತದೆ. ಇದು ಕ್ಷೇತ್ರದ ಜನರ ಆಸೆಯೂ ಹೌದು. ನಾನು ಸಚಿವನಾಗಿ ಮಾಡುವ ಕೆಲಸ ಶಾಸಕನಾಗಿಯೇ ಮಾಡುತ್ತಿರುವೆ. ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ. ಬೇರೆ ವಿಷಯಕ್ಕೂ ಕಿವಿಗೊಡಲ್ಲ ಎಂದು ತಿಳಿಸಿದರು.
ನಮ್ಮ ತಂದೆ (ಚಂದ್ರಕಾoತ ಬೆಲ್ಲದ) ಐದು ಭಾರಿ ಶಾಸಕರಾದರೂ, ಸಚಿವ ಸ್ಥಾನ ನೀಡಿಲ್ಲವೆಂಬ ಬೇಸರ ಕ್ಷೇತ್ರದ ಜನತೆಗೆ ಇದೆ. ಆದರೆ, ಪಕ್ಷ-ಪಕ್ಷದ ನಾಯಕತ್ವ ವಿಶಿಷ್ಟ ಕಾರ್ಯನಿರ್ವಹಣೆ ಮಾಡುತ್ತಿದೆ. ಯಾವಾಗ ಯಾರಿಗೆ ಅವಕಾಶ ಕೊಡಬೇಕೆಂಬುದು ಅವರಿಗೆ ಬಿಟ್ಟಿದೆ ಎಂದರು.