ಹೊಸ ದಿಗಂತ ವರದಿ, ಮಡಿಕೇರಿ:
ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಪಕ್ಷ ವರಿಷ್ಠರೇ ತೀರ್ಮಾನಿಸಬೇಕಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಇದೊಂದು ಸವಾಲಿನ ಕೆಲಸವಾಗಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರ ರಚಿಸಲು ಮತದಾರರು ಜನಾದೇಶ ನೀಡಿದ್ದಾರೆ.
ಆದರೆ ಪೂರ್ಣ ಬಹುಮತ ನೀಡಲಿಲ್ಲ ಹೀಗಾಗಿ ಕಾಂಗ್ರೆಸ್ಗೆ ರಾಜೀನಾಮೆ ಕೊಟ್ಟವರ ಸಹಕಾರದಿಂದ ಸರಕಾರ ರಚಿಸಲಾಗಿದೆ. ಅವರ ಸಹಕಾರ ಸಿಕ್ಕಿದಾಗ ಸಚಿವ ಸ್ಥಾನದ ಭರವಸೆ ನೀಡಿದ್ದೇವೆ. ಅದನ್ನು ಈಡೇರಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ಕೊಡಗಿನ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಬೇಸರ ತನಗೂ ಇದೆ. ಮುಂದಿನ ದಿನಗಳಲ್ಲಿ ಅವರಿಗೂ ಸ್ಥಾನ ಸಿಗುವ ಅವಕಾಶವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಪ್ರಮುಖರ ವಿರುದ್ಧವೇ ಹೇಳಿಕೆ ನೀಡುತ್ತಿರುವ ಯತ್ನಾಳ್ ಅವರ ಹೆಸರನ್ನು ಶಿಸ್ತು ಸಮಿತಿಗೆ ಕಳುಹಿಸಲಾಗಿದೆ. ಆದರೆ ಅವರ ಮಾತಿಗೆ ನಾವು ಯಾರೂ ಬೆಲೆ ಕೊಡುವುದಿಲ್ಲ ಎಂದು ಈಶ್ವರಪ್ಪ ನುಡಿದರು.
ಬಿಜೆಪಿ ನಗರ ಪ್ರದೇಶಕ್ಕೆ ಸೀಮಿತವಾದ ಪಕ್ಷ ಎನ್ನುವ ಭಾವನೆ ಗ್ರಾ.ಪಂ ಚುನಾವಣೆಯ ನಂತರ ದೂರವಾಗಿದೆ. ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಗೆಲುವು ಸಾಧಿಸಿದ್ದಾರೆ. ಮುಂಬರುವ ಜಿ.ಪಂ ಮತ್ತು ತಾ.ಪಂ ಚುನಾವಣೆಯಲ್ಲೂ ಬಹುಮತ ಪಡೆಯುವ ಉದ್ದೇಶದಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜನಸೇವಕ್ ಸಮಾವೇಶವನ್ನು ನಡೆಸಲಾಗುತ್ತಿದೆ ಎಂದು ಈಶ್ವರಪ್ಪ ತಿಳಿಸಿದರು.