ಉಡುಪಿ: ಕಳೆದ ಕೆಲವು ದಿನಗಳಿಂದ ಪೊಲೀಸ್ ಇಲಾಖೆಯ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಕಲಿ ಐಡಿ ಆಯ್ತು, ಈಗ ನೇರ ಮುಖ್ಯಮಂತ್ರಿಗಳ ಹೆಸರಿನಲ್ಲಿಯೇ ನಕಲಿ ಇ-ಮೇಲ್ ಐಡಿ ಸೃಷ್ಟಿಸಿ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ!
ಮುಖ್ಯಮಂತ್ರಿಗಳ ಹೆಸರಲ್ಲಿ ನಕಲಿ ಇ-ಮೇಲ್ ಐಡಿ ಸೃಷ್ಟಿಸಿ, ಮಣಿಪಾಲದ ಮಾಹೆಯನ್ನು ವಂಚಿಸಿದ ಬಗ್ಗೆ ಉಡುಪಿಯ ಸೆನ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದೆ. ನವೆಂಬರ್ ಮಧ್ಯಭಾಗದಲ್ಲಿ ಕಾಲೇಜು ಆರಂಭಕ್ಕೆ ಚಿಂತನೆ ನಡೆದಿರುವಾಗಲೇ ಈ ದುಷ್ಕೃತ್ಯ ನಡೆದಿದೆ.
ನ. 1ರಂದು ಸಂಜೆ 4.48ಕ್ಕೆ ಯಾರೋ ಅಪರಿಚಿತ ವ್ಯಕ್ತಿಯು, [email protected] ಎಂಬ ನಕಲಿ ಇ-ಮೇಲ್ ಐ.ಡಿ.ಯನ್ನು ಸೃಷ್ಟಿಸಿ, ಅದರಲ್ಲಿ ಮುಖ್ಯಮಂತ್ರಿ ಅವರ ವಿಳಾಸ ನಮೂದಿಸಿ ಮುಖ್ಯ ಮಂತ್ರಿ ಕಚೇರಿಯಿಂದಲೇ ಇಮೇಲ್ ಕಳುಹಿಸಿದ ರೀತಿಯಲ್ಲಿ ಸಂದೇಶ ರವಾನಿಸಿದ್ದ. ಮಾಹೆ ವಿವಿಯ ರಿಜಿಸ್ಟಾರ್ ಡಾ. ನಾರಾಯಣ ಸಭಾಹಿತ್ ಅವರ ಹೆಸರಿಗೆ ಮೇಲ್ ಬಂದಿದ್ದು, ಕಾಲೇಜು ಮರು ಆರಂಭದ ಬಗ್ಗೆ ದೇಶ-ವಿದೇಶಗಳ ಪೋಷಕರಿಂದ ಅನೇಕ ದೂರುಗಳು ಬಂದಿದೆ. ಹಾಗಾಗಿ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಕಾಲೇಜು ಮರು ಆರಂಭ ಮಾಡಬಾರದು. ಕೊರೋನಾ ಭೀತಿ ಇನ್ನೂ ದೂರವಾಗದ ಕಾರಣ, ಕಾಲೇಜು ಮರು ಆರಂಭಕ್ಕೆ ಈ ಸಮಯ ಸೂಕ್ತವಲ್ಲ; ಹಾಗಾಗಿ ಮಾಹೆ ವಿವಿಯು 2021ರ ಜನವರಿಯವರೆಗೆ ಯಾವುದೇ ತರಗತಿ ಆರಂಭಿಸದಂತೆ ಈ ಸುಳ್ಳು ಇಮೇಲ್ ನಲ್ಲಿ ಆದೇಶಿಸಲಾಗಿತ್ತು.
ಮುಖ್ಯ ಮಂತ್ರಿಯವರ ಇ-ಮೇಲ್ ಐ.ಡಿ.ಯನ್ನು ಕದ್ದು, ಅದೇ ರೀತಿಯಾಗಿ ಸುಳ್ಳು ಇ-ಮೇಲ್ ಐ.ಡಿ.ಯನ್ನು ಅವರ ಹೆಸರಿನಲ್ಲಿ ಸೃಷ್ಟಿಸಿ, ಇ-ಮೇಲ್ ಸಂದೇಶವನ್ನು ಮುಖ್ಯ ಮಂತ್ರಿಯವರೇ ಕಳುಹಿಸಿದ್ದಾಗಿ ಎನ್ನುವ ರೀತಿಯಲ್ಲಿ ಸಂಸ್ಥೆಗೆ ತಪ್ಪು ಮಾಹಿತಿಯನ್ನು ನೀಡಿ, ನಂಬಿಸಿ, ವಂಚಿಸಿದ ಬಗ್ಗೆ ಸದ್ಯ ದೂರು ದಾಖಲಾಗಿದೆ.