ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಈಶಾನ್ಯ ದಿಲ್ಲಿಯಲ್ಲಿ ಮಂಗಳವಾರವೂ ಹಿಂಸಾಚಾರ ಮುಂದುವರಿದಿದ್ದು ಗಾಯಗೊಂಡವರ ಸಂಖ್ಯೆ 150ಕ್ಕೆ ತಲುಪಿದ್ದು, ಸಾವಿಗೀಡಾದವರ ಸಂಖ್ಯೆ 11ಕ್ಕೆ ಏರಿಕೆ ಯಾಗಿದೆ. ಈಶಾನ್ಯ ದಿಲ್ಲಿಯ ಕೆಲ ಭಾಗಗಳಲ್ಲಿ ಕಲ್ಲು ತೂರಾಟ, ಅಂಗಡಿ-ಮುಂಗಟ್ಟುಗಳನ್ನು ಧ್ವಂಸ, ಸ್ಥಳಿಯರಿಗೆ ಬೆದರಿಕೆ ಒಡ್ಡುವುದು ಸೇರಿದಂತೆ ಹಲವು ವಿಧ್ವಂಸಕ ಕೃತ್ಯಗಳು ಜರುಗಿದವು.
ಹಿಂಸಾಚಾರದ ಹಿನ್ನೆಲೆ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ಪರೀಕ್ಷೆಗಳನ್ನು ಮುಂದೂಡಲಾಗಿದೆ. ಗಲಭೆಯಿಂದಾಗಿ ಬಹುತೇಕ ಸ್ಥಳೀಯ ನಿವಾಸಿಗಳು ಹೆದರಿಕೆಯಿಂದಾಗಿ ಮನೆಯಲ್ಲಿಯೇ ಉಳಿದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೋಮವಾರದಿಂದ ಜಾರಿಯಲ್ಲಿರುವ ನಿಷೇಧಾಜ್ಞೆ ಮಾರ್ಚ್ 24ರವರೆಗೂ ಮುಂದುವರಿಯಲಿದೆ. ಗಲಭೆಯಲ್ಲಿ ದಿಲ್ಲಿ ಪೊಲೀಸ್ ಮುಖ್ಯ ಪೇದೆ ರತನ್ ಲಾಲ್ ಸೇರಿದಂತೆ 11 ಮಂದಿ ಮೃತರಾಗಿದ್ದಾರೆ. ಅಲ್ಲದೆ, ಡಿಸಿಪಿ ಶಹದರ ಸೇರಿ 56 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಈಶಾನ್ಯ ದಿಲ್ಲಿಯಲ್ಲಿ ಜನತೆ ಕಾನೂನನ್ನು ಕೈಗೆತ್ತಿಕೊಳ್ಳದೆ ಶಾಂತಿ ಕಾಪಾಡಬೇಕು. ಗಲಭೆಯನ್ನು ನಿಯಂತ್ರಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದಿದ್ದಾರೆ ಪೊಲೀಸರು.