Thursday, August 11, 2022

Latest Posts

ಸಿಗಂದೂರು ಚೌಡೇಶ್ವರಿ ದೇವಸ್ಥಾನವನ್ನು ಮುಜರಾಯಿಗೆ ಸೇರಿಸುವುದಿಲ್ಲ: ಸಿಎಂ ಯಡಿಯೂರಪ್ಪ ಸ್ಪಷ್ಟನೆ

ಹೊಸ ದಿಗಂತ ವರದಿ, ಶಿವಮೊಗ್ಗ:

ಸಾಗರ ತಾಲ್ಲೂಕಿನ ಸಿಗಂದೂರು ಚೌಡೇಶ್ವರಿ ದೇವಸ್ಥಾನವನ್ನು ಮುಜರಾಯಿಗೆ ಸೇರಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಶಾಸಕ ಹರತಾಳು ಹಾಲಪ್ಪ ಜೊತೆಗೆ ವಿವಿಧ ಮಠಾಧೀಶರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದಾಗ ಈ ಭರವಸೆ ನೀಡಿದ್ದಾರೆ.
ಜೊತೆಗೆ ಸಿಗಂದೂರು ದೇವಸ್ಥಾನದ ಆಡಳಿತ ಮೇಲ್ವಿಚಾರಣೆ ಹಾಗೂ ಪಾರದರ್ಶಕತೆ ತರಲು ನಿಯೋಜಿಸಿರುವ ಸಮಿತಿಗೆ ಈಡಿಗ ಜನಾಂಗಕ್ಕೆ ಸೇರಿದ ಶ್ರೀ ರೇಣಕಾನಂದ ಸ್ವಾಮೀಜಿಯವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗುತ್ತದೆ. ಹಾಲಿ ರಚಿಸಿರುವ ಸಮಿತಿ ನಾಲ್ಕು ತಿಂಗಳವರೆಗೆ ಮುಂದುವರೆಯಲಿ. ನಂತರ ಪುನರ್ ಪರಿಶೀಲನೆ ಮಾಡೋಣ ಎಂದು ತಿಳಿಸಿದ್ದಾರೆ.
ಭಕ್ತರು ನೀಡುವ ದೇಣಿಗೆ ಹಾಗೂ ಹಣದ ಬಗ್ಗೆ ಪಾರದರ್ಶಕತೆ ತರಬೇಕು ಎನ್ನುವ ಭಕ್ತರ ಕೋರಿಕೆ ಮೇರೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಲಹಾ ಸಮಿತಿ ರಚನೆ ಮಾಡಲಾಗಿದೆ. ಈಗ ರಚನೆಯಾಗಿರುವ ಸಲಹಾ ಸಮಿತಿಯಲ್ಲಿ ನಿಮ್ಮೆಲ್ಲರ ಬೇಡಿಕೆಯಂತೆ ಈಡಿಗ ಜನಾಂಗಕ್ಕೆ ಸೇರಿದ ಶ್ರೀ ರೇಣುಕಾನಂದ ಸ್ವಾಮೀಜಿಯವರನ್ನು ಸೇರ್ಪಡೆಗೊಳಿಸಿ, ಶ್ರೀಗಳು ನೀಡುವ ಸಲಹೆ ಮಾರ್ಗದರ್ಶನವನ್ನು ಸಮಿತಿ ಅಳವಡಿಸಿಕೊಳ್ಳುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಂಜಾರ ಸಮಾಜದ ಸೇವಾಲಾಲ್ ಶ್ರೀ ಅರೇಮಲ್ಲಾಪುರದ ಪ್ರಣಯಾನಂದ ಸ್ವಾಮೀಜಿ,ಭಗೀರಥ ಮಠದ ಪುರುಷೋತ್ತಮಪುರಿ ಸ್ವಾಮೀಜಿ, ಕುಂಚಿಟಿಗ ಗುರುಪೀಠದ ಶಾಂತವೀರ ಸಾಮಿಗಳು, ಹೊಸದುರ್ಗ ಕನಕಗುರು ಪೀಠದ ಈಶ್ವರಾನಂದಪುರಿ ಸ್ವಾಮಿಗಳು, ತಿಗಳರ ಲಕ್ಷ್ಮೀನರಸಿಂಹ ಸ್ವಾಮಿ, ಮಡಿವಾಳ ಮಾಚಿದೇವ ಶ್ರೀಗಳು, ಗಾಣಿಗರ ಡಾ. ಬಸವಕುಮಾರಸ್ವಾಮಿ ಶ್ರೀಗಳು, ಚಿತ್ರದುರ್ಗ ಮೇದಾರ ಪೀಠದ ಬಸವ ಛಲವಾದಿ ಸ್ವಾಮಿಗಳು ಇನ್ನಿತರರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss