ದಿಗಂತ ವರದಿ, ಶಿವಮೊಗ್ಗ:
ಶ್ರೀ ಕ್ಷೇತ್ರ ಸಿಗಂದೂರಿನಲ್ಲಿ ಶೂದ್ರ ಶಕ್ತಿಗಳ ಮೇಲೆ ನಡೆವ ಶೋಷಣೆ ತಪ್ಪಿಸಲು ನಡೆಸುವ ಹೋರಾಟದಲ್ಲಿ ಪಾಲ್ಗೊಳ್ಳುವುದಾಗಿ
ಮಾಜಿ ರಾಜ್ಯಸಭೆ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.
ಶಿವಮೊಗ್ಗ ಈಡಿಗರ ಭವನದಲ್ಲಿ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಹಿಂದುತ್ವದ ಹೆಸರಲ್ಲಿ ಹಿಂದುಳಿದವ
ರನ್ನು ಹೋರಾಟಕ್ಕೆ ಬಳಸಿಕೊಳ್ಳುವ ಬಿಜೆಪಿ, ಹಿಂದುಳಿದವರ ಆಡಳಿತ ಮಂಡಳಿ ಇರುವ ದೇಗುಲಕ್ಕೆ ಮೇಲ್ವಿಚಾರಣಾ ಸಮಿತಿ ಮಾಡಿರುವುದು ತರವಲ್ಲ. ಸಿಗಂದೂರು ಹಿಂದುಳಿದವರ ಚೌಡಮ್ಮ ದೇವಿ ಅದನ್ನು ಚೌಡೇಶ್ವರಿ ಮಾಡಿರುವ ವೈದಿಕಶಾಹಿ ಅಲ್ಲಿ ಶೂದ್ರ ಸಂಪ್ರದಾಯಕ್ಕೆ ತಿಲಾಂಜಲಿ ಹೇಳಿದೆ. ಇದು ಹಿಂದುಳಿದವರ ಮೇಲೆ ನಡೆಸಿದ ಧಾರ್ಮಿಕ ಪ್ರಹಾರ. ನನಗೆ ಯಾವುದೇ ಜಾತಿಯ ಬೇಧಭಾವ ಇಲ್ಲ. ಎಲ್ಲಿ ಶೋಷಣೆ ಆದರೂ ನೊಂದವರ ಪರ ನಿಲ್ಲುತ್ತೇನೆ ಎಂದರು.
ಸಿಗಂದೂರು ಚೌಡಮ್ಮ ದೇವಿ ದೇಗುಲಕ್ಕೆ ಭೇಟಿ ನೀಡುತ್ತೇನೆ. ಅಲ್ಲಿನ ಭಕ್ತರ ಭಾವನೆಗೆ ಧಕ್ಕೆಯಾಗುವಂತಹ ಯಾವುದೇ ಕ್ರಮಗಳಿಗೆ ನನ್ನ ಸ್ಪಷ್ಟ ವಿರೋಧ ಇದೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿಯೊಂದಿಗೆ ಮಾತನಾಡುತ್ತೇನೆ. ಈ ವಿಚಾರದಲ್ಲಿ ಇಲ್ಲಿನ ಜನ ಮಾಡುವ ಯಾವುದೇ ಹೋರಾಟದಲ್ಲಿ ನಾನಿರುತ್ತೇನೆ. ನಮ್ಮ ಹೋರಾಟ ಶಾಂತಿಯುತವಾಗಿರಬೇಕು ಎಂದರು.
ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್, ಜಿಪಂ ಸದಸ್ಯ ಕಲಗೋಡು ರತ್ನಾಕರ್, ಜಿ.ಡಿ.ಮಂಜುನಾಥ್, ಕೆ.ವೈ.ರಾಮಚಂದ್ರ, ಪ್ರೊ.ಕಲ್ಲನ, ತೇಕಲೆ ರಾಜಪ್ಪ, ಕಾಗೋಡು ರಾಮಪ್ಪ ಈಡಿಗರ ಮಹಿಳಾ ಸಂಘದ ವೀಣಾ ವೆಂಕಟೇಶ್, ಲಲಿತಾ ಹೊನ್ನಪ್ಪ ಮತ್ತಿತರರು ಭಾಗವಹಿಸಿದ್ದರು.