ಹೊಸದಿಗಂತ ವರದಿ ಶಿವಮೊಗ್ಗ:
ಸಿಗಂದೂರು ದೇವಸ್ಥಾನದ ಆಡಳಿತದ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿರುವುದನ್ನು ವಿರೋಧಿಸಿ ಹಾಗೂ ಮೇಲುಸ್ತುವಾರಿ ಮತ್ತು ಸಲಹಾ ಸಮಿತಿ ರದ್ದತಿಗೆ ಆಗ್ರಹಿಸಿ ನ.೯ರಂದು ಮಧ್ಯಾಹ್ನ ೩ಕ್ಕೆ ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗರ ಭವನದಲ್ಲಿ ಹೋರಾಟದ ಪೂರ್ವ ಸಿದ್ಧತಾ ಸಭೆ ಆಯೋಜಿಸಲಾಗಿದೆ ಎಂದು ಜಿಲ್ಲಾ ಈಡಿಗರ ಸಂಘದ ಜಿಲ್ಲಾಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್ ತಿಳಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಎಂಎಲ್ಸಿ ಬಿ.ಕೆ.ಹರಿಪ್ರಸಾದ್, ಮಾಜಿ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಶಾರದಾ ಪೂರ್ಯನಾಯ್ಕ್, ಮುಖಂಡರಾದ ಆರ್.ಎಂ. ಮಂಜುನಾಥ ಗೌಡ, ಎಸ್.ಶ್ರೀಕಾಂತ್, ಈಡಿಗರ ಸಂಘದ ರಾಜ್ಯಾಧ್ಯಕ್ಷ ತಿಮ್ಮೇಗೌಡ ಮತ್ತಿತರರು ಸಭೆಗೆ ಆಗಮಿಸಲಿದ್ದಾರೆ ಎಂದರು.
ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳ ಸಮಾಜದ ಮುಖಂಡರು ಒಳಗೊಂಡಂತೆ ಎಲ್ಲ ಸಮಾಜದ ಮುಖಂಡರಿಗೆ ಆಹ್ವಾನ ನೀಡಲಾಗಿದೆ. ಸಭೆಯಲ್ಲಿ ಹೋರಾಟದ ಮುಂದಿನ ರೂಪರೇಷೆಗಳ ಬಗ್ಗೆ ಚರ್ಚಿಸಲಾಗುವುದು ಎಂದರು.
ದೇವಸ್ಥನದ ಆಡಳಿತ ಈ ಹಿಂದಿನಂತೆ ಧರ್ಮದರ್ಶಿ ರಾಮಪ್ಪನವರ ಕುಟುಂಬದ ಬಳಿ ಇರಬೇಕೆಂಬುದು ಪ್ರಮುಖ ಒತ್ತಾಯವಾಗಿದೆ. ದೇವಸ್ಥಾನದ ಸಮೊತೊಯಲ್ಲಿರುವ ಗೊಂದಲ ಬಗೆಹರಿದಿದೆ. ಹೀಗಾಗಿ ಸಮಿತಿ ರದ್ದುಪಡಿಸಬೇಕೆಂಬುದು ಪ್ರಮುಖ ಒತ್ತಾಯವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಗೋಡು ರಾಮಪ್ಪ, ಭುಜಂಗಯ್ಯ, ಗೀತಾಂಜಲಿ ದತ್ತಾತ್ರೇಯ, ವೀಣಾ ವೆಂಕಟೇಶ್, ಕವಿತಾ ಅಣ್ಣಪ್ಪ, ಲಕ್ಷ್ಮೀಕಾಂತ್, ಉಮೇಶ್, ಮತ್ತಿತರರು ಇದ್ದರು.