Monday, July 4, 2022

Latest Posts

ಸಿಗಂದೂರು ದೇವಸ್ಥಾನದ ಪ್ರಕರಣದಲ್ಲಿ ನನ್ನ ಕೈವಾಡ ಇಲ್ಲ: ಶಾಸಕ ಹರತಾಳು ಹಾಲಪ್ಪ

ಹೊಸ ದಿಗಂತ ವರದಿ, ಶಿವಮೊಗ್ಗ:

ಸಿಗಂದೂರು ದೇವಸ್ಥಾನದಲ್ಲಿ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ನನ್ನ ಕೈವಾಡವಿಲ್ಲ. ದೇವಸ್ಥಾನ ಆಡಳಿತದ ಧರ್ಮದರ್ಶಿ ಮತ್ತು ಪ್ರಧಾನ ಅರ್ಚಕರ ನಡುವೆ ನಡೆದ ವಾಗ್ವಾದ ಪರಿಣಾಮ ದೇವಸ್ಥಾನದಲ್ಲಿ ಪಾರದರ್ಶಕತೆ ಕಾಪಾಡಲು ಸರ್ಕಾರ ಸಮಿತಿ ರಚಿಸಿದೆ ಎಂದು ಶಾಸಕ ಹರತಾಳು ಹಾಲಪ್ಪ ಪ್ರತಿಪಾದಿಸಿದರು.
ಹೊಸನಗರ ಪಟ್ಟಣದ ಆರ್ಯ ಈಡಿಗರ ಸಮುದಾಯ ಭವನ ಕಾಮಗಾರಿ ವೀಕ್ಷಿಸಿ ನಂತರ ಮಾತನಾಡಿದ ಅವರು, ಸಿಗಂದೂರು ವಿಚಾರದಲ್ಲಿ ಕೆಲವು ಕೈಗಳು ಸಲ್ಲದ ಅಪಪ್ರಚಾರ ಮಾಡಿವೆ. ಅಲ್ಲಿನ ಪ್ರಕರಣವನ್ನು ಸುಖಾಂತ್ಯ ಹಾಡಲು ಸಾಕಷ್ಟು ಶ್ರಮಿಸಲಾಗಿದೆ. ಅದು ಹೇಗೋ ಪರಿಸ್ಥಿತಿ ಕೈಮೀರುವ ಹಂತ ತಲುಪಿದ್ದು ಭಕ್ತರಿಗೆ ನೋವು ತರಿಸಿದೆ. ಉನ್ನತ ಮಟ್ಟದ ರಾಜೀ ಸಂಧಾನಗಳು ನಡೆದವು. ಆದರೂ ಪ್ರಕರಣ ಸುಸೂತ್ರವಾಗಿ ನಡೆಯದ ಕಾರಣ ಕೊನೆಯ ಹಂತವಾಗಿ ಸರ್ಕಾರ ವರದಿ ತರಿಸಿಕೊಂಡು ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಪಾತ್ರವಹಿಸಿದೆ. ಮುಖ್ಯಮಂತ್ರಿಗಳು ಅಭಯ ನೀಡಿದಂತೆ ಯಾವುದೇ ಕಾರಣಕ್ಕೂ ದೇವಸ್ಥಾನವನ್ನು ಮುಜರಾಯಿಗೆ ವಹಿಸುವ ಮಾತೇ ಇಲ್ಲವಾಗಿದೆ ಎಂದು ಹೇಳಿದರು.
ಈ ಹಿಂದೆ ದೇವಸ್ಥಾನ ವಿಚಾರದಲ್ಲಿ ಕಾಗೋಡು ತಿಮ್ಮಪ್ಪ ಅವರು ದೇವಸ್ಥಾನವನ್ನು ಮುಜರಾಯಿಗೆ ವಹಿಸಿಕೊಳ್ಳಬೇಕು ಎಂದು ಸಾಕಷ್ಟು ಬಾರಿ ಮನವಿ ಮಾಡಿದ್ದರು. ಈ ಬಗ್ಗೆ ನಮ್ಮಲ್ಲಿ ಸಾಕ್ಷ್ಯಧಾರವಿದೆ. ಸುಮ್ಮನೆ ನಮ್ಮ ಹೆಸರನ್ನು ತರುವ ಕೆಲಸ ಬಿಟ್ಟು ಸಮಸ್ಯೆ ಬಗೆಹರಿಸುವ ದಿಕ್ಕಿನಲ್ಲಿ ನಮ್ಮ ಸಮುದಾಯ ಗಮನ ಹರಿಸಿಬೇಕಾಗಿದೆ ಎಂದು ಮನವಿ ಮಾಡಿದರು.
ಸಂಸದ ಸದಸ್ಯ ಬಿ.ವೈ ರಾಘವೇಂದ್ರ, ಜಿಪಂ ಸದಸ್ಯರಾದ ಕಲಗೋಡು ರತ್ನಾಕರ್, ಸುರೇಶ್ ಸ್ವಾಮಿರಾವ್, ಶ್ವೇತಾ ಬಂಡಿ, ಆರ್ಯ ಈಡಿಗರ ಸಂಘದ ಅಧ್ಯಕ್ಷ ಬಂಡಿ ರಾಮಚಂದ್ರಪ್ಪ, ಉಪಾಧ್ಯಕ್ಷ ಎರಗಿ ಉಮೇಶ್, ತಾಪಂ ಅಧ್ಯಕ್ಷ ಆಲವಳ್ಳಿ ವೀರೇಶ್, ಪಪಂ ಅಧ್ಯಕ್ಷೆ ಗುಲಾಬಿ ಮರಿಯಪ್ಪ, ಉಪಾಧ್ಯಕ್ಷೆ ಕೃಷ್ಣವೇಣಿ, ಮಂಡಾಣಿ ಮೋಹನ, ಮತ್ತಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss