ಶಿವಮೊಗ್ಗ: ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಸಂಬಂಧಿಸಿ ರಚನೆಯಾಗಿರುವ ಸಲಹೆ ಮತ್ತು ಮೇಲುಸ್ತುವಾರಿ ಸಮಿತಿ ಮೊದಲ ಸಭೆ ಇಂದು ಸಂಜೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು.
ಸಭೆಯಲ್ಲಿ ಕೆಲ ಪ್ರಮುಖ ತೀರ್ಮಾನ ಕೈಗೊಳ್ಳಲಾಯಿತು. ಮುಖ್ಯವಾಗಿ ದೇವಾಲಯದ ಆದಾಯ ಮತ್ತು ಖರ್ಚು ವೆಚ್ಚದ ಉಸ್ತುವಾರಿಯನ್ನು ಜಿಲ್ಲಾಧಿಕಾರಿಗೆ ವಹಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಸಭೆಯ ನಂತರ ಮಾಹಿತಿ ನೀಡಿ, ದೇವಸ್ಥಾನದಲ್ಲಿ ರಾಮಪ್ಪ ಅವರು ಧರ್ಮದರ್ಶಿಯಾಗಿ ಮತ್ತು ಶೇಷಗಿರಿ ಭಟ್ ಪ್ರಧಾನ ಅರ್ಚಕರಾಗಿ ಮುಂದುವರಿಯುವರು. ದೇವಸ್ಥಾನದಲ್ಲಿನ ಯಾವುದೇ ಚಟುವಟಿಕೆಗಳು ಬದಲಾವಣೆಯಾಗುವುದಿಲ್ಲ ಎಂದರು.
ದೇವಸ್ಥಾನದ ಆದಾಯ ಮತ್ತು ಖರ್ಚು ವೆಚ್ಚಗಳ ಲೆಕ್ಕಪತ್ರಗಳ ನಿರ್ವಹಣೆಯನ್ನು ಮಾತ್ರ ಜಿಲ್ಲಾಧಿಕಾರಿ ನೋಡಿಕೊಳ್ಳುತ್ತಾರೆ. ದೇವಸ್ಥಾನಕ್ಕೆ ನಿತ್ಯವೂ ಬರುವ ಭಕ್ತರಿಂದ ದೇಣಿಗೆ, ಕಾಣಿಕೆ, ವಿವಿಧ ಪೂಜೆ ಪುನಸ್ಕಾರಗಳ ಮೂಲಕ ಲಕ್ಷಾಂತರ ರೂ. ಆದಾಯ ಬರುತ್ತಿದೆ. ದೇವಸ್ಥಾನದ ಪಾರದರ್ಶಕತೆ ಕಾಪಾಡಲು ಕೌಂಟರ್ನಲ್ಲಿ ಪ್ರತಿಯೊಂದು ಕಾಣಿಕೆಗೂ ರಶೀದಿ ನೀಡಲಾಗುವುದು. ಭಕ್ತರು ನೀಡುವ ದಾನ ಮತ್ತು ಹರಕೆಯ ಹಣದ ಬಗ್ಗೆ ಜಿಲ್ಲಾಕಾರಿ ಮತ್ತು ಸಾಗರದ ಉಪ ವಿಭಾಗಾಕಾರಿ ಲೆಕ್ಕ ಇಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಈ ಕಾರ್ಯಕ್ಕೆ ದೇವಸ್ಥಾನದಲ್ಲಿರುವ ಸಿಬ್ಬಂದಿಯನ್ನೇ ಬಳಸಿಕೊಳ್ಳಲಾಗುತ್ತದೆ. ಇದರ ಹೊರತಾಗಿ ದೇವಸ್ಥಾನದೊಳಗೆ ಯಾವುದೇ ಬದಲಾವಣೆ ಇರುವುದಿಲ್ಲ. ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸುವುದು ಮುಗಿದ ಅಧ್ಯಾಯ ಎಂದು ತಿಳಿಸಿದರು.
ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಚ್.ಹಾಲಪ್ಪ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಸಾಗರ ಉಪ ವಿಭಾಗಾಕಾರಿ ಡಾ. ಎಲ್.ನಾಗರಾಜ್, ಧರ್ಮದರ್ಶಿ ರಾಮಪ್ಪ, ಪ್ರಧಾನ ಅರ್ಚಕ ಶೇಷಗಿರಿ ಭಟ್ ಹಾಜರಿದ್ದರು.