ಹೊಸ ದಿಗಂತ ವರದಿ ಮೈಸೂರು:
ತುಮಕೂರಿನ ಶ್ರೀಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು,ರಾಜ್ಯ ಸರ್ಕಾರ ರಚಿಸಿರುವ ಮರಾಠಿ ಅಭಿವೃದ್ಧಿ ಪ್ರಾಧಿಕಾರವನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷರಾದ ಮಾಜಿ ಶಾಸಕ ವಾಟಾಳ್ ನಾಗರಾಜ್ ಅವರು ಮಂಗಳವಾರ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದರು.
ರೈಲ್ವೆ ನಿಲ್ದಾಣದ ಬಳಿಯಿರುವ ವೃತ್ತದ ಕಟ್ಟೆಯಲ್ಲಿ ಕುಳಿತು ಕೆಲಕಾಲ ಧರಣಿ ನಡೆಸಿದರು. ಈ ವೇಳೆ ಮಾತನಾಡಿದ ಅವರು, ತ್ರಿವಿಧ ದಾಸೋಹ ನಡೆಸುವ ಮೂಲಕ ಸಾವಿರಾರು ಮಂದಿಗೆ ಶಿಕ್ಷಣ ನೀಡುತ್ತಿರುವ, ಧಾರ್ಮಿಕ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಬಂದಿದ್ದ ನಡೆದಾಡುವ ದೇವರು ಎಂದು ಖ್ಯಾತರಾದ ಲಿಂಗೈಕ್ಯರಾದ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ಪ್ರಶಸಿಯನ್ನು ಕೇಂದ್ರ ಸರ್ಕಾರ ಈಗಾಗಲೇ ನೀಡಬೇಕಾಗಿತ್ತು. ಆದರೆ ಇನ್ನೂ ಕೂಡ ನೀಡಿಲ್ಲ. ಲಕ್ಷಾಂತರ ಮಂದಿ ಭಕ್ತರು ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಬೇಕೆಂದು ಒತ್ತಾಯಿಸುತ್ತಿದ್ದರೂ, ಈ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯ ಸರ್ಕಾರ ಈ ಬಗ್ಗೆ ಕೂಡಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಒತ್ತಡ ಹೇರಬೇಕು, ರಾಜ್ಯದ ಕೇಂದ್ರ ಸಚಿವರುಗಳು ಕೂಡ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ಹೇರಬೇಕೆಂದು ಆಗ್ರಹಿಸಿದರು.
ಸಿದ್ದಗಂಗಾ ಮಠದ ಶ್ರೀಗಳಿಗೆ ಏಕೆ ಭಾರತ ರತ್ನ ಕೊಡಲಿಲ್ಲ ಎಂಬ ಕಾರಣವನ್ನು ಕೂಡಲೇ ಜನರಿಗೆ ಹೇಳಬೇಕು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರೇ ನಿಮಗೆ ಒಂದು ನಿಮಿಷ ಅಧಿಕಾರದಲ್ಲಿ ಉಳಿಯುವ ಹಾಗಿಲ್ಲ. ಜನವರಿ 26 ಒಳಗೆ ಶ್ರೀಶಿವಕುಮಾರ ಸ್ವಾಮಿ ಅವರಿಗೆ ಭಾರತ ರತ್ನ ಕೊಡಬೇಕು. ಈ ಬಗ್ಗೆ ಪಾರ್ಲಿಮೆಂಟ್ ಸದಸ್ಯರು ಪ್ರಧಾನ ಮಂತ್ರಿ ಗಳನ್ನು ಒತ್ತಾಯಿಸಬೇಕು. ಇಲ್ಲದಿದ್ದರೆ ರಾಜ್ಯದ ಎಲ್ಲಾ ವರ್ಗದ ಸನ್ಯಾಸಿಗಳು, ಮಠಾಧಿಪತಿಗಳನ್ನು ಸೇರಿಸಿಕೊಂಡು ದೊಡ್ಡ ಹೋರಾಟ ರೂಪಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಮರಾಠ ಪ್ರಾಧಿಕಾರ ರಚನೆ ಮಾಡಿರುವುದು ಕರ್ನಾಟಕಕ್ಕೆ ದೊಡ್ಡ ಕಳಂಕ. ಇದರಿಂದ ಬೆಳಗಾವಿ, ಖಾನಾಪುರ ನಿಪ್ಪಾಣಿ ಇತರೆ ಪ್ರದೇಶಗಳು ಮಹಾರಾಷ್ಟçಕ್ಕೆ ಸೇರಬೇಕೆಂದು ಶಿವಸೇನೆಯು ಕೇಸು ದಾಖಲಿಸಿದೆ. ಯಡಿಯೂರಪ್ಪ ನವರು ಈ ಹಿಂದೆ ಕರ್ನಾಟಕ ಬಂದ್ ವಿಫಲ ಗೊಳಿಸಲು ಎಲ್ಲೆಂದರಲ್ಲಿ ಪೊಲೀಸ್ ರನ್ನು ನಿಯೋಜಿಸಿ ಅನೇಕ ಮುಖಂಡರು ಗಳನ್ನು ಬಂಧಿಸಿದ್ದರು. ಯಡಿಯೂರಪ್ಪ ಅವರನ್ನು ನೇರವಾಗಿ ಕೇಳುತ್ತೇನೆ ಯಾಕೆ ಇಷ್ಟು ಅರ್ಜೆಂಟಾಗಿ ಪ್ರಾಧಿಕಾರ ರಚನೆ ಮಾಡಿದ್ದೀರಿ? ನೀವು ಕೆಟ್ಟ ದಾರಿ ಹಿಡಿದು, ಕನ್ನಡವನ್ನು ತುಳಿಯಲು ಹೊರಟಿದ್ದೀರಿ. ನಿಮಗೆ ಸರ್ಕಾರ ಉಳಿಸುವುದು ಬಿಟ್ಟರೆ ಬೇರೆ ಏನು ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮರಾಠ ಪ್ರಾಧಿಕಾರ ರದ್ದುಗೊಳಿಸುವಂತೆ ಒತ್ತಾಯಿಸಿ ಜ. 09 ರಂದು ರಾಜ್ಯಾದ್ಯಂತ ಸುಮಾರು 1000 ಕಡೆ ರೈಲ್ವೆ ಹಳಿಯ ಮೇಲೆ ಕುಳಿತು ಸುಮಾರು 3000 ಸಾವಿರ ಸಂಘಟನೆಗಳ ಬೆಂಬಲದೊಂದಿಗೆ ರೈಲು ತಡೆ ನಡೆಸುವ ಮೂಲಕ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು. ಎಲ್ಲಾ ಜಿಲ್ಲಾಕೇಂದ್ರ ಮತ್ತು ತಾಲೂಕು ಕೇಂದ್ರ ಗಳಲ್ಲಿಪ್ರತಿಭಟನೆ ನಡೆಸಲಾಗುವುದು ಎಂದರು.