ಹೊಸದಿಗಂತ ವರದಿ,ಕೊಪ್ಪಳ:
ಬಿಜೆಪಿಯಲ್ಲಿ ಯಾವುದೇ ಗೊಂದಲ ಇರದೇ ಇರುವ ಸಿಎಂ ಬದಲಾವಣೆ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಗೊತ್ತಿದೆ ಅಂದರೆ ಅವರಿಗೆ ಇನ್ನ ಮೇಲೆ ರಾಜಕೀಯಲ್ಲಿ ಅವಕಾಶವಿಲ್ಲ ಎಂದು ಭವಿಷ್ಯ ಹೇಳುವ ಕಾಯಕ ಪ್ರಾರಂಭಿಸಿರಬಹುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ಲೇವಡಿ ಮಾಡಿದರು.
ಅವರು ಬುಧವಾರ ನಗರದ ಮೀಡಿಯಾ ಕ್ಲಭ್ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆರ್ಎಸ್ಎಸ್ನವರು ನನಗೆ ಗೊತ್ತು, ಅವರಿಂದ ಸಿಎಂ ಬದಲಾವಣೆ ಕುರಿತು ತಿಳಿದು ಬಂದಿದೆ ಎಂದು ಹೇಳುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆರ್ಎಸ್ಎಸ್ಗೆ ಯಾವಾಗ ಸೇರಿದ್ದರು ಎಂಬುದು ಗೊತ್ತಾಗುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರಿಗೆ ರಾಜ್ಯದ ಬಿಜೆಪಿ ಆಡಳಿತ ವೈಫಲ್ಯ ಹೇಳಲು ಯಾವುದೇ ವಿಷಯವಿಲ್ಲವಾಗಿದೆ.
ಈಗಾಗಿ ನನಗೆ ಅವರು ಗೊತ್ತು, ಇವರು ಗೊತ್ತು ಅವರ ಪಕ್ಷದಲ್ಲಿ ಹೀಗೆ ಆಗುತ್ತದೆ ಎಂದು ಹೇಳುತ್ತಾ ಸಾಗಿದ್ದಾರೆ. ಆದರೆ ಸಿದ್ದರಾಮಯ್ಯನವರಿಗೆ ಮುಂದಿನ ರಾಜಕೀಯದಲ್ಲಿ ಅವಕಾಶ ಇಲ್ಲ ಎಂದು ತಿಳಿದುಕೊಂಡು ಭವಿಷ್ಯ ಹೇಳುವ ಕಾಯಕಕ್ಕೆ ಮುಂದಾಗಿರಬಹುದು ಎಂದು ಲೇವಡಿ ಮಾಡಿದರು.
ನಾಳೆ ಜನಸೇವಕ ಸಮಾವೇಶ: ಜಿಲ್ಲಾ ಬಿಜೆಪಿಯಿಂದ (ಜ.13ರಂದು) ಬುಧವಾರ ಮದ್ಯಾಹ್ನ 3 ಗಂಟೆಗೆ ಶಿವಶಾಂತವೀರ ಮಂಗಲ ಭವನದಲ್ಲಿ ಜನಸೇವಕ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ಸುಮಾರು 2ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ.
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ಮೇಲೆ ಜನರ ಸಮಸ್ಯೆಗಳಿಗೆ ಧ್ವನಿಯಾಗಿ ನಿಂತಿದೆ. ಕಳೆದ ಬಾರಿ ಗ್ರಾಮ ಪಂಚಾಯತಿಯಲ್ಲಿ ಕೇವಲ 600-700ಕ್ಕೆ ಸಿಮಿತವಾಗಿದ್ದ ಬಿಜೆಪಿ ಬೆಂಬಲಿತ ಸದಸ್ಯರು ಇಂದು ಕೇಂದ್ರ ಹಾಗೂ ರಾಜ್ಯ ಸರಕಾರದ ಜನಪರ ಸರ್ವತೋಮುಖ ಅಭಿವೃದ್ಧಿ ಯೋಜನೆಗಳನ್ನು ಮೆಚ್ಚಿ ಈಬಾರಿ 1,700 ಕ್ಕೂ ಹೆಚ್ಚು ಬಿಜೆಪಿ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ. ಇದರಿಂದ ಮುಂದಿನ ಚುನಾವಣೆಯಲ್ಲಿ ಇದು ದಿಕ್ಷೂಚಿಯಾಗಲಿದೆ ಎಂದು ಹೇಳಿದರು.
ಈ ಗೋಷ್ಠಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಹಲಿಗೇರಿ, ವಕ್ತಾರ ಗಿರಿಶಾನಂದ ಜ್ಞಾನಸುಂದರ್,ಶಂಕರಗೌಡ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.