ಬೆಳಗಾವಿ: ವಿದೇಶದಿಂದ ಬರುವ ಗಣ್ಯರನ್ನು ಸ್ವಾಗತಿಸುವ ಪರಂಪರೆ ಮೊದಲಿನಿಂದಲೂ ಇದೆ. ಅಮೇರಿಕಾದಂಥ ದೊಡ್ದ ದೇಶದ ಅಧ್ಯಕ್ಷರನ್ನು ಸ್ವಾಗತಿಸುವುದರಿಂದ ಭಾರತದ ಗೌರವ ವೃದ್ಧಿಯಾಗುತ್ತದೆ ಹಾಗೂ ನಮ್ಮ ದೇಶದ ಆರ್ಥಿಕ ವ್ಯವಸ್ಥೆಯ ಬೆಳವಣಿಗೆಗೆ ಒಳ್ಳೆಯ ಪರಿಣಾಮ ಬೀರುತ್ತದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆ ಮಾಡುವ ಸ್ಥಾನದಲ್ಲಿ ಕುಳಿತಿದ್ದಾರೆ. ಟೀಕೆ ಮಾಡುತ್ತಾರೆ. ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಟೀಕೆ ಮಾಡುವ ಸ್ಥಾನದಲ್ಲಿ ಕುಳತಿರುವ ಸಿದ್ದರಾಮಯ್ಯ ಟ್ರಂಪ್ ಭಾರತ ಭೇಟಿಯ ಬಗ್ಗೆ ಟೀಕೆ ಮಾಡಿರುವುದು ಹೊಸದೇನಲ್ಲ. ಹೀಗಾಗಿ ಎಲ್ಲ ವಿಷಯಗಳಿಗೂ ಟೀಕೆ ಮಾಡುತ್ತಲೇ ಇರುತ್ತಾರೆ. ಸಿದ್ದರಾಮಯ್ಯ ಟೀಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದರು.
ಘೋಷಣೆ ಕೂಗುವವರ ವಿರುದ್ಧ ಕಠಿಣ ಕ್ರಮ: ಕೆಲವರು ಸಿಎಎ ವಿರುದ್ಧ ವ್ಯವಸ್ಥಿತವಾಗಿ ಗಲಾಟೆ ಮಾಡುತ್ತಿದ್ದಾರೆ. ಸಿಎಎ ವಿರೋಧಿಗಳ ಮನಸ್ಥಿತಿ ಪಾಕಿಸ್ಥಾನ್ ಪರ ಘೋಷಣೆ ಕೂಗುವಷ್ಟರ ಮಟ್ಟಿಗೆ ತಲುಪಿದೆ. ಕಾನೂನು ಚೌಕಟ್ಟು ಮೀರಿ, ದೇಶ ವಿರೋಧಿ ಘೋಷಣೆ ಕೂಗುತ್ತಿದ್ದಾರೆ. ಎಲ್ಲ ಪ್ರತಿಭಟನೆಗಳಿಗೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸುತ್ತಿದೆ. ಆದರೆ ರಾಷ್ಟ್ರವಿರೋಧಿ ಘೋಷಣೆ ಕೂಗುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ರಾಷ್ಟ್ರ ವಿರೋಧಿ ಭಾವನೆ ಹೊಂದಿರುವವರನ್ನು ಹತ್ತಿಕ್ಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ದೇಶವಿರೋಧಿ ಘೋಷಣೆ ಕೂಗಿದ ಅಮೂಲ್ಯ ಲಿಯೊನಾ ವಿರುದ್ಧ ಕಾನೂನು ಕ್ರಮ ಜರುಗಲಿದೆ. ಅಲ್ಲದೆ ಆಕೆಯನ್ನು ತಯಾರು ಮಾಡಿದವರ ವಿರುದ್ಧವೂ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.
ಪುನಃ ಆಲೋಚಿಸಿ: ಪಾಕಿಸ್ಥಾನಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರ ರುಂಡ ಕತ್ತರಿಸಬೇಕು ಎಂಬ ಇಬ್ರಾಹಿಂ ಹೇಳಿಕೆ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನಗೆ ಉತ್ತರಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ನರೇಂದ್ರ ಮೋದಿ ಬಗ್ಗೆ ಹಗುರವಾಗಿ ಮಾತನಾಡಿದ ಯು.ಟಿ ಖಾದರ್ ಸದನದಲ್ಲೇ ಕ್ಷಮೆ ಕೇಳಿದ್ದಾರೆ. ಸಿ.ಎಂ. ಇಬ್ರಾಹಿಂ ಗೆ ಈ ರೀತಿಯ ಹೇಳಿಕೆಗಳು ಗೌರವ ಹೆಚ್ಚಿಸುವುದಿಲ್ಲ. ಅವರು ತಾವಾಡಿದ ಮಾತಿನ ಬಗ್ಗೆ ಪುನರ್ ಆಲೋಚನೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.