ಹೊಸದಿಗಂತ ವರದಿ, ಉಡುಪಿ
ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸುಮಾರು 3000 ಕೋಟಿ ರೂ. ವೆಚ್ಚದಲ್ಲಿ 1079 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲು ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಲಾಗಿದೆ ಎಂದು ಸಣ್ಣ ನೀರಾವರಿ ಇಲಾಖಾ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.
ಮಂಗಳವಾರ ಉಡುಪಿಯಲ್ಲಿ ಮಾತನಾಡಿದ ಸಚಿವರು, ಈಗಾಗಲೇ ಉಭಯ ಜಿಲ್ಲೆಗಳಲ್ಲಿ ಸರ್ವೆ ಮಾಡಿ 1079 ಜಾಗಗಳನ್ನು ಗುರುತಿಸಲಾಗಿದೆ. ಅಷ್ಟು ಕಡೆಗಳಲ್ಲಿ ಕಿಂಡಿ ಅಣೆಕಟ್ಟುಗಳನ್ನು ಮಾಡಿದರೆ ಅವಿಭಜಿತ ದ.ಕ. ಜಿಲ್ಲೆಯ ಪಶ್ಚಿಮವಾಹಿನಿ ನದಿಗಳಲ್ಲಿ ನೀರನ್ನು ತಡೆಯಬಹುದು ಎಂದರು.
ಈ ಮಾಸ್ಟರ್ ಪ್ಲ್ಯಾನ್ ಅನ್ನು ಮುಂಬರುವ ಸಚಿವ ಸಂಪುಟದಲ್ಲಿರಿಸಿ, ಅನುಮೋದನೆಯನ್ನು ಪಡೆಯಲಾಗುತ್ತದೆ ಮತ್ತು ಮುಂದಿನ 5ವರ್ಷಗಳಲ್ಲಿ ಅನುಷ್ಠಾನಿಸುತ್ತೇವೆ. ಕಿಂಡಿ ಅಣೆಕಟ್ಟೆಗಳನ್ನು ನಿರ್ಮಿಸುವುದರಿಂದ ಕುಡಿಯುವ ನೀರಿನ ಸಮಸ್ಯೆಯ ಜೊತೆಗೆ, ಸಂಪರ್ಕ ದಾರಿಯ ಸಮಸ್ಯೆ ನಿವಾರಣೆಯಾಗಲಿದೆ. ಅಲ್ಲದೇ ರೈತರಿಗೆ ಕೃಷಿಗೂ ನೀರಾವರಿ ಅನುಕೂಲವಾಗಲಿದೆ ಎಂದು ಸಚಿವ ಮಾಧುಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ ನದಿಯನ್ನೇ ಮೊದಲ ಆದ್ಯತೆಯನ್ನಾಗಿರಿಸಿ ಈ ಯೋಜನೆಯನ್ನು ಅನುಷ್ಠಾನಿಸುತ್ತೇವೆ. ನೇತ್ರಾವತಿ ನದಿ ಎಲ್ಲೆಲ್ಲ ಹರಿಯುತ್ತದೋ ಅದನ್ನು ಸಾಧ್ಯವಿರುವಲ್ಲಿ ತಡೆದು, ನೀರನ್ನು ಸಂಗ್ರಹಿಸಲಾಗುತ್ತದೆ. ಹೆಚ್ಚುವರಿ ನೀರನ್ನು ಸಮುದ್ರಕ್ಕೆ ಬಿಡಲಾಗುತ್ತದೆ. ಆದ್ದರಿಂದ ಮಂಗಳೂರು ಮತ್ತು ಸುತ್ತಮುತ್ತ ನೀರೊದಗಿಸಲು ಸಾಧ್ಯವಾಗಲಿದೆ ಎಂದರು.