ಹೊಸ ದಿಗಂತ ವರದಿ,ದಾವಣಗೆರೆ:
ಎಸ್.ಎಸ್. ಮಾಲ್ ವಿರುದ್ಧ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದ ಸಿಮೆಂಟ್ ವ್ಯಾಪಾರಿ ಮಾದೇವ್ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಆಗ್ರಹಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019 ಡಿಸೆಂಬರ್ 24ರಂದು ಸಿಮೆಂಟ್ ವ್ಯಾಪಾರಿ ಮಾದೇವ್ ಮಾರಣಾಂತಿಕ ಹಲ್ಲೆಗೊಳಗಾಗಿ, 2020 ಸೆಪ್ಟೆಂಬರ್ 3ರಂದು ಮೃತಪಟ್ಟಿದ್ದಾರೆ. ಈ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದವರು ಯಾರು? ಯಾವ ಕಾರಣಕ್ಕಾಗಿ ಈ ಅಮಾಯಕ ವ್ಯಕ್ತಿಯ ಮೇಲೆ ಹಲ್ಲೆ ಮಾಡಿಸಲಾಯಿತು? ಹಲ್ಲೆ ಮಾಡಿಸಿದ ಆ ಕಾಣದ ಕೈ ಯಾವುದು ಎಂಬುದರ ಸತ್ಯಾಸತ್ಯತೆ ತಿಳಿಯಲು ಸಿಬಿಐ ತನಿಖೆಯೇ ಸೂಕ್ತ ಎಂದರು.
ಈ ಹಿಂದೆ ಮಾದೇವ್ ಶ್ಯಾಮನೂರು ಕುಟುಂಬದ ಎಸ್.ಎಸ್.ಗಣೇಶ್ ಪಾಲುದಾರಿಕೆಯಲ್ಲಿ ಕ್ರಶರ್ ನಡೆಸುತ್ತಿದ್ದರು. ಪಾಲುದಾರಿಕೆಯಲ್ಲಿ ಏನೋ ವ್ಯತ್ಯಾಸಗಳುಂಟಾಗಿ ಮಾದೇವ್ ಅವರನ್ನು ಪಾಲುದಾರಿಕೆಯಿಂದ ಎಸ್.ಎಸ್.ಗಣೇಶ್ ಹೊರಕಳುಹಿಸಿದ್ದರು. ನಂತರ ಎಸ್.ಎಸ್. ಮಾಲ್ನ್ನು ಸಾರ್ವಜನಿಕ ಆಸ್ತಿ ಒತ್ತುವರಿ ಮಾಡಿ ಕಟ್ಟಲಾಗಿದ್ದು, ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂಬುದಾಗಿ ಆರೋಪಿಸಿ ಅದೇ ಮಾಲ್ಗೆ ಹೊಂದಿಕೊಂಡಂತೆ ಮನೆ ಇರುವ ಮಾದೇವ್ ಹೈಕೋರ್ಟ್ ಮೆಟ್ಟಿಲೇರಿದ್ದರು ಎಂದು ಅವರು ತಿಳಿಸಿದರು.
ಕೂಲಂಕುಶವಾಗಿ ವಿಚಾರಣೆ ನಡೆದು, ಪಾಲಿಕೆಯ ನಿಯಮಗಳನ್ನು ಪಾಲಿಸದೇ ಕಟ್ಟಿರುವ ಎಸ್.ಎಸ್.ಮಾಲ್ ಒತ್ತುವರಿಯನ್ನು ಜೂನ್ 2019ರಿಂದ 8 ವಾರಗೊಳಗಾಗಿ ತೆರವುಗೊಳಿಸಿದ ನಂತರ ಮಹಾನಗರ ಪಾಲಿಕೆಗೆ 4 ವಾರದೊಳಗೆ ವರದಿ ಸಲ್ಲಿಸುವಂತೆ ಹೈಕೋರ್ಟ್ ಆದೇಶಿಸಿತ್ತು. ಆಗ ಎಸ್.ಎಸ್. ಮಾಲ್ ಮಾಲೀಕ ಎಸ್.ಎಸ್.ಗಣೇಶ್ ಈಗಾಗಲೇ 2019 ಡಿಸೆಂಬರ್ವರೆಗೆ ಮದುವೆ ಬುಕ್ ಮಾಡಿಕೊಂಡಿರುವುದರಿಂದ ಕಾಲಾವಕಾಶ ಕೇಳಿದ ಮೇರೆಗೆ ನ್ಯಾಯಾಲಯವು ನವೆಂಬರ್ 30ರವರೆಗೆ ಕಾಲಾವಕಾಶ ನೀಡಿತ್ತು. ನಂತರವೂ ತೆರವುಗೊಳಿಸದೇ ಇದ್ದಾಗ ಡಿಸೆಂಬರ್ 2019ರಿಂದ 4 ವಾರಗಳೊಳಗಾಗಿ ಒತ್ತುವರಿ ತೆರವುಗೊಳಿಸಲು ಹೈಕೋರ್ಟ್ ಪುನಃ ಮಹಾನಗರ ಪಾಲಿಕೆಗೆ ಆದೇಶಿಸಿತ್ತು. ಹೈಕೋರ್ಟ್ ಆದೇಶವನ್ನು ಈವರೆಗೂ ಪಾಲಿಸದಿರುವುದು ನ್ಯಾಯಲಯ ಆದೇಶದ ಉಲ್ಲಂಘನೆಯಾಗಿದೆ ಎಂದು ಅವರು ದೂರಿದರು.
ಹೈಕೋರ್ಟ್ ಪುನಃ ಆದೇಶ ಮಾಡಿದ ಬೆನ್ನಲ್ಲೇ ಮಾದೇವ್ ಮೇಲೆ ಮಾರಾಣಾಂತಿಕ ಹಲ್ಲೆ ನಡೆದಿದೆ. ಹಲ್ಲೆ ನಡೆದ ಸಂದರ್ಭದಲ್ಲಿ ಮಾದೇವ್ ಅವರ ಸಂಬಂಧಿ ವಿದ್ಯಾನಗರ ಪೋಲಿಸ್ ಠಾಣೆಯಲ್ಲಿ ಎಸ್.ಎಸ್. ಮಾಲ್ ಮಾಲೀಕ ಎಸ್.ಎಸ್.ಗಣೇಶ್ ಅವರನ್ನು ಮೊದಲ ಆರೋಪಿಯನ್ನಾಗಿಸಿ ಇನ್ನಿಬ್ಬರ ವಿರುದ್ಧ ಕೊಲೆ ಪ್ರಯತ್ನದ ದೂರು ನೀಡಿದ್ದರು. ಆದರೆ ಈವರೆಗೆ ಆಪಾದಿತರ ಮೇಲೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ, ತನಿಖೆಯನ್ನು ಸಹ ಪೂರ್ಣಗೊಳಿಸಿಲ್ಲ. ಇಂತಹ ಘೋರ ಅಪರಾಧ ಪ್ರಕರಣದಲ್ಲೂ ಸರಿಯಾದ ತನಿಖೆಯಾಗದೆ ಚಾರ್ಜ್ ಶೀಟ್ ಸಲ್ಲಿಸದಿರುವುದು ಮೇಲ್ನೋಟಕ್ಕೆ ರಾಜಕೀಯ ಪ್ರಭಾವಿಗಳ ಹಸ್ತಕ್ಷೇಪ ಕಂಡುಬರುತ್ತದೆ ಎಂದು ಅವರು ಸಂಶಯ ವ್ಯಕ್ತಪಡಿಸಿದರು.
ಪೋಲಿಸ್ ಇಲಾಖೆ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ. ಆರೋಪಿಗಳ ವಿಚಾರಣೆಯನ್ನೂ ಮಾಡದೇ, ಶ್ಯಾಮನೂರು ಕುಟುಂಬದ ಒತ್ತಡಕ್ಕೆ ಪೊಲೀಸರು ಮಣಿದಿದ್ದಾರೆ. ಪೊಲೀಸರಿಂದ ನ್ಯಾಯ ದೊರಕುವ ಭರವಸೆ ಇಲ್ಲದೇ ಇರುವ ಕಾರಣ ಪ್ರಕರಣವನ್ನು ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಬೇಕು. ಅನ್ಯಾಯ, ಅಕ್ರಮದ ವಿರುದ್ಧ ಧ್ವನಿ ಎತ್ತಿ ಜೀವವನ್ನೇ ಬಲಿಕೊಟ್ಟ ಮಾದೇವ್ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು. ಧಾರವಾಡದಲ್ಲಿ ಯೋಗಿಶ್ ಗೌಡನ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಿ ಮಾಜಿ ಸಚಿವ ವಿನಯ್ ಕುಲಕರ್ಣಿಯನ್ನು ಜೈಲಿಗೆ ಕಳುಹಿಸಿದ ರೀತಿಯಲ್ಲೇ ಮಾದೇವ್ ಹತ್ಯೆ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು. ಮೊದಲ ಆರೋಪಿ ಸಮೇತ ಇನ್ನುಳಿದ ಆರೋಪಿಗಳನ್ನು ಜೈಲಿಗೆ ಕಳುಹಿಸಬೇಕು. ಇಲ್ಲವಾದಲ್ಲಿ ಪೊಲೀಸ್ ಇಲಾಖೆ, ಪಾಲಿಕೆ ವಿರುದ್ಧ ಬೃಹತ್ ಧರಣಿ ಸತ್ಯಾಗ್ರಹ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಟಿ.ವೀರೇಶ, ಸದಸ್ಯರಾದ ಶಾಂತಕುಮಾರ ಸೋಗಿ, ಎಲ್.ಡಿ.ಗೋಣೆಪ್ಪ, ಮುಖಂಡರಾದ ನರೇಂದ್ರಕುಮಾರ, ಆನಂದರಾವ್ ಶಿಂಧೆ, ಪ್ರವೀಣ ಜಾಧವ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.