Wednesday, July 6, 2022

Latest Posts

ಸಿಹಿಸಿಹಿ ಜೇನುತುಪ್ಪ ಹಿಂದಿನ ಕಹಿಕಹಿ ಸತ್ಯ ಈಗ ಬಯಲು!!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ದೇಶದಲ್ಲಿ ಮಾರಾಟವಾಗುವ ಪ್ರಮುಖ ಬ್ರಾಂಡ್‌ ಕಂಪನಿಗಳ ಜೇನು ತುಪ್ಪದಲ್ಲಿ ಅಪಾರ ಪ್ರಮಾಣದ ಕಲಬೆರಿಕೆ ಇದೆ ಎಂದು ಲ್ಯಾಬ್ ಟೆಸ್ಟಿಂಗ್ ವರದಿ ಬಹಿರಂಗ ಪಡಿಸಿದೆ.

ಪರಿಶುದ್ಧ ಜೇನು ತುಪ್ಪವೆಂದು ಮಾರಾಟ ಮಾಡುವ ಪ್ರತಿಷ್ಠಿತ ಕಂಪನಿಗಳ ಜೇನು ತುಪ್ಪದಲ್ಲಿ ಸಕ್ಕರೆ ಅಂಶ ಇರುವುದಾಗಿ ಲ್ಯಾಬ್ ಟೆಸ್ಟಿಂಗ್ ವರದಿ ಮೂಲಕ ತಿಳಿದಿರುವುದಾಗಿ ವಿಜ್ಞಾನ ಮತ್ತು ಪರಿಸರ ಕೇಂದ್ರ (ಸಿಎಸ್‌ಇ) ಮಾಹಿತಿ ನೀಡಿದೆ.

ಜೇನು ತುಪ್ಪದ ಶುದ್ಧತೆಯನ್ನು ಪರೀಕ್ಷಿಸಲು ಸಿಎಸ್‌ಇ 13 ಉನ್ನತ ಮತ್ತು ಸಣ್ಣ ಬ್ರಾಂಡ್‌ಗಳನ್ನು ಪರೀಕ್ಷೆ ಮಾಡಿ ನೋಡಿದೆ. ಆದರೆ ಈ ಬ್ರಾಂಡ್‌ಗಳಲ್ಲಿ ಶೇಕಡಾ 77 ರಷ್ಟು  ಕಲಬೆರಿಕೆ ಇರುವುದು ಪತ್ತೆಯಾಗಿದೆ.

ಕೆಲವು ಕಂಪನಿಗಳು ಪರೀಕ್ಷೆಯಲ್ಲಿ ಪತ್ತೆ ಮಾಡಲು ಸಾಧ್ಯವಾಗದಂತಹ ಸಕ್ಕರೆ ಪಾಕವನ್ನು ಸಿದ್ಧ ಪಡಿಸುತ್ತಿದ್ದಾರೆ. ಪೇಂಟ್ ನಲ್ಲಿ ಬಳಸುವ ದ್ರಾವಣವೆಂದು ವಂಚಿಸಿ ಪರೀಕ್ಷೆಯಲ್ಲಿ ಪತ್ತೆಮಾಡಲು ಸಾಧ್ಯವಾಗದಂತಹ ಸಕ್ಕರೆ ಪಾಕವನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಅಲ್ಪ ಪ್ರಮಾಣದ ಜೇನು ತುಪ್ಪದಲ್ಲಿ ಈ ಸಕ್ಕರೆ ಪಾಕ ಮಿಕ್ಸ್ ಮಾಡಿದರೆ ಅದು  ಜೇನು ತುಪ್ಪದಂತೆಯೇ ಕಾಣುತ್ತದೆ. ಗುಣಮಟ್ಟ ಪರೀಕ್ಷೆಯಲ್ಲಿ ಗೊತ್ತಾಗುವುದೂ ಇಲ್ಲ. ಆ ರೀತಿಯ ಪಾಕ ಸಿದ್ಧ ಪಡಿಸಲಾಗುತ್ತಿದೆ ಎನ್ನುವುದು ತಿಳಿದು ಬಂದಿದೆ.

ವಿಜ್ಞಾನ ಮತ್ತು ಪರಿಸರ ಕೇಂದ್ರದ ಪ್ರಧಾನ ನಿರ್ದೇಶಕಿ ಸುನಿತಾ ನಾರಾಯಣ್ ಈ ಬಗ್ಗೆ ಮಾಹಿತಿ ನೀಡಿದ್ದು, ಇದೊಂದು ಅಪಾಯಕಾರಿ ಬೆಳವಣಿಗೆ. ಇಂತಹ ಕಲಬೆರಿಕೆಯಿಂದ ಆರೋಗ್ಯದ ಮೇಲೆ ಇದುವರೆಗೂ ಆಗದ ಹೆಚ್ಚಿನ ಅಪಾಯ ಉಂಟು ಮಾಡಬಹುದು ಎಂದಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss