ಹೊಸ ದಿಗಂತ ವರದಿ, ಮಡಿಕೇರಿ:
ಜಿಲ್ಲೆಯಲ್ಲಿನ ಸಿ ಮತ್ತು ಡಿ ವರ್ಗದ ಭೂಮಿಯ ಜಂಟಿ ಸರ್ವೆಯಾಗುವವರೆಗೆ ಯಾವುದೇ ಕಾರಣಕ್ಕೂ ಕೃಷಿಕರಿಗೆ ತೊಂದರೆ ನೀಡದಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರೂ ಆಗಿರುವ ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರು ಸ್ಪಷ್ಟ ನಿರ್ದೇಶನ ನೀಡಿದರು.
ನಗರದ ತಾ.ಪಂ.ಎಸ್ಜೆಎಸ್ವೈ ಸಭಾಂಗಣದಲ್ಲಿ ಶನಿವಾರ ನಡೆದ ತಾ.ಪಂ. ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಲವು ದಶಕಗಳಿಂದ ಪೈಸಾರಿ ಭೂಮಿಯಲ್ಲಿ ಕಾಫಿ ಗಿಡ ಕೃಷಿ ಮಾಡಿಕೊಂಡು ಬರುತ್ತಿರುವ ಸಣ್ಣ ರೈತರಿಗೆ ತೊಂದರೆ ನೀಡುತ್ತಿರುವ ಬಗ್ಗೆ ದೂರುಗಳಿದ್ದು, ಇಂತಹ ದೂರುಗಳು ಕೇಳಿ ಬರಬಾರದು. ಭಾಗಮಂಡಲ, ಸಂಪಾಜೆ, ಕಾಲೂರು, ಬಿರುನಾಣಿ ಮತ್ತಿತರ ಭಾಗಗಳಲ್ಲಿ ಎಷ್ಟು ಕಷ್ಟದಿಂದ ಬದುಕುತ್ತಿದ್ದಾರೆ ಎಂಬ ಬಗ್ಗೆ ಯೋಚಿಸಬೇಕು ಎಂದರು.
ಕಂದಾಯ ಇಲಾಖೆ ಮೂಲಕ ಆಗಬೇಕಿರುವ ಕೆಲಸಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಗ್ರಾ.ಪಂ.ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆ, ಹಲವು ಅಭಿವೃದ್ಧಿ ಕಾರ್ಯಗಳಿಗೆ ಜಾಗ ಒದಗಿಸುವುದು ಮತ್ತಿತರ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ತಹಶೀಲ್ದಾರರಿಗೆ ಸೂಚಿಸಿದರು.
ತಹಶೀಲ್ದಾರ್ಮಹೇಶ್ ಅವರು 26 ಗ್ರಾ.ಪಂ.ಗಳಲ್ಲಿ 12 ಗ್ರಾ.ಪಂ.ಗಳಿಗೆ ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ಜಾಗ ಒದಗಿಸಲಾಗಿದೆ. ಉಳಿದ ಗ್ರಾ.ಪಂ.ಗಳಿಗೆ ಭೂಮಿ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.
ಸರ್ಕಾರ ಪೌತಿ ಖಾತೆ ಆಂದೋಲನ ನಡೆಸಲು ಅವಕಾಶ ನೀಡಿದ್ದು, ಜನ ಸಾಮಾನ್ಯರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಸ್ಥಳೀಯರಿಗೆ ಮಾಹಿತಿ ನೀಡಿ ಆಂದೋಲನವನ್ನು ಯಶಸ್ವಿಗೊಳಿಸುವಂತೆ ತಹಶೀಲ್ದಾರರಿಗೆ ಕೆ.ಜಿ.ಬೋಪಯ್ಯ ಸೂಚಿಸಿದರು.
ಕೃಷಿಕರಿಗೆ ಸಹಾಯಧನ : ರಾಷ್ಟ್ರೀಯ ತೋಟಗಾರಿಕಾ ಅಭಿಯಾನ ಯೋಜನೆಯಡಿ ಕಿತ್ತಳೆ ಮತ್ತು ಕಾಳು ಮೆಣಸು ಗಿಡ ವಿತರಣೆ, ಜೇನು ಕೃಷಿ ಅಭಿವೃದ್ಧಿ, ಬಾಳೆ ಬೆಳೆಗೆ ಸಹಾಯಧನ, ಹೀಗೆ ಹಲವು ಕಾರ್ಯಕ್ರಮಗಳಿಗೆ ಸಹಾಯಧನವನ್ನು ಕೃಷಿಕರಿಗೆ ತಲುಪಿಸುವಂತೆ ಅವರು ಸೂಚಿಸಿದರು.
ವಿದ್ಯುತ್ ಸಂಪರ್ಕ : ಸೌಭಾಗ್ಯ ಯೋಜನೆಯಡಿ ವಿದ್ಯುತ್ ಸಂಪರ್ಕ ಇಲ್ಲದ ಪ್ರತೀ ಕುಟುಂಬಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ವಿವಿಧ ನಿಗಮ ವ್ಯಾಪ್ತಿಯಲ್ಲಿ ಬಾಕಿ ಇರುವ ಕುಡಿಯುವ ನೀರು ಯೋಜನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಈ ಸಂಬಂಧ ಪಂಚಾಯತ್ ರಾಜ್ ಇಲಾಖೆಯವರು ಅನುದಾನ ಒದಗಿಸುವಂತೆ ನಿರ್ದೇಶನ ನೀಡಿದರು.
ಕೊರೋನಾ ಹಿನ್ನೆಲೆಯಲ್ಲಿ ಅಂಗನವಾಡಿಗಳು ನಡೆಯುತ್ತಿಲ್ಲ. ಆದ್ದರಿಂದ ಮನೆಗಳಿಗೆ ಆಹಾರ ಕಿಟ್ ವಿತರಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಮತ್ತು ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಿಸುವುದರೊಂದಿಗೆ ಆರ್ಥಿಕ ಸಹಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು, ಕೋವಿಡ್ ಸಂದರ್ಭದಲ್ಲಿ ಕಾರ್ಮಿಕರಿಗೆ ಸರ್ಕಾರದ ಸಹಾಯಧನ ಕಲ್ಪಿಸಿರುವ ಬಗ್ಗೆ ಮಾಹಿತಿ ನೀಡುವಂತೆ ಕೋರಿದರು.
ಈ ಸಂಬಂಧ ಮಾಹಿತಿ ನೀಡಿದ ತಾಲೂಕು ಕಾರ್ಮಿಕ ಅಧಿಕಾರಿ ಯತ್ನಟಿ ಅವರು ತಾಲೂಕಿನಲ್ಲಿ 443 ಕಟ್ಟಡ ಕಾರ್ಮಿಕರು ಹೆಸರು ನೋಂದಾಯಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಅಸಂಘಟಿತ ಕಾರ್ಮಿಕರಿಗೆ ಸಹಾಯಧನ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್, ಸದಸ್ಯರಾದ ಯಾಲದಾಳು ಪದ್ಮಾವತಿ, ಕಲಾವತಿ, ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ತಾ.ಪಂ.ಉಪಾಧ್ಯಕ್ಷ ಸಂತು ಸುಬ್ರಮಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಡಬ್ಬಡ್ಕ ಶ್ರೀಧರ್, ಗ್ರಾ.ಪಂ. ಆಡಳಿತ ಅಧಿಕಾರಿಗಳು, ಪಿಡಿಒಗಳು ಇತರರು ಇದ್ದರು.