ರಾಮನಗರ: ಅಧಿಕೃತವಾಗಿ ವಿಧಾನ ಪರಿಷತ್ ಸದಸ್ಯ ಸ್ಥಾನ ಪಡೆಯದೆ ಸರ್ಕಾರಿ ಕಛೇರಿಯ ಸಭಾಂಗಣವನ್ನು ದುರುಪಯೋಗಪಡಿಸಿಕೊಂಡಿರುವ ಮಾಜಿ ಶಾಸಕ ಸಿ.ಪಿ.ಯೋಗೀಶ್ವರ್ ಮೇಲೆ ಅಧಿಕಾರಿಗಳಿಗೆ ದೂರು ನೀಡಿರುವುದಾಗಿ ಮಾಜಿ ಚನ್ನಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಸಿ.ವೀರೇಗೌಡ ಆರೋಪಿಸಿದರು.
ಅವರು ನಗರದ ಪೊಲೀಸ್ ಶಸ್ತ್ರ ಮೀಸಲು ಪಡೆ ಮೈದಾನದ ಬಳಿಯಿರುವ ತಾಲ್ಲೂಕು ಕಾಂಗ್ರೆಸ್ ಕಛೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಯೋಗೇಶ್ವರ್ ಮೇಲೆ ತೀವ್ರ ವಾಗ್ದಾಳಿ ನಡೆಸಿದರು.
ಪ್ರಮಾಣವಚನ ಸ್ವೀಕಾರ ಮಾಡಿ ವಿಧಾನ ಪರಿಷತ್ ಸದಸ್ಯ ಸ್ಥಾನ ಪಡೆಯದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ರವರು ಸರ್ಕಾರಿ ಕಛೇರಿಯ ಸಭಾಂಗಣದಲ್ಲಿ ಬಿಜೆಪಿ ಕಾರ್ಯಕರ್ತರ ಜೊತೆ ಕುಳಿತುಕೊಂಡು ಪತ್ರಿಕಾಗೋಷ್ಠಿ ಮಾಡಿ ನೀತಿ ನಿಯಮವನ್ನು ಮುರಿದಿದ್ದು ಅಲ್ಲದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ನಿವೃತ್ತಿ ಹೊಂದಿದ ಕುದುರೆಗಳೆಂದು ಕೀಳುಮಟ್ಟದ ಲೇವಡಿ ಮಾಡಿರುವುದು ಯೋಗೇಶ್ವರ್ ಘನತೆಗೆ ತಕ್ಕದಲ್ಲ ಎಂದು ಟೀಕಿಸಿದರು.
21 ವರ್ಷ ಕ್ಷೇತ್ರದಲ್ಲಿ ತನ್ನ ಅಧಿಕಾರ ಅನುಭವಿಸಿದ ಯೋಗೀಶ್ವರ್ ಕೋವಿಡ್-19ನಂತಹ ಸಂಕಷ್ಟದ ಸಮಯದಲ್ಲಿ ಕ್ಷೇತ್ರದ ಒಬ್ಬ ಮತದಾರರ ಕಷ್ಟ ಕಾರ್ಪಣ್ಯ ಕೇಳದಿರುವುದು ಅವರ ಅಧಿಕಾರ ರಾಜಕಾರಣಕ್ಕೆ ಸಾಕ್ಷಿಯಾಗಿದ್ದು ಇಂತಹ ಸಂದಿಗ್ಧ ಸಂದರ್ಭದಲ್ಲಿ ಕ್ಷೇತ್ರದ ಮತದಾರರಿಗೆ ಎಲ್ಲಾ ವಿಧದಲ್ಲೂ ನೆರವಾದವರು ಡಿ.ಕೆ.ಸಹೋದರರು ಎಂಬುದನ್ನು ಮರಿತ್ತಿದ್ದಿರಾ ಎಂದು ಯೋಗೀಶ್ವರ್ಗೆ ಪ್ರಶ್ನೆ ಹಾಕಿದರು.
ಕ್ಷೇತ್ರ ಯಾರದ್ದೇಯಾಗಿದ್ದರೂ ಕ್ಷೇತ್ರದ ಬಗ್ಗೆ ಬಹಳಷ್ಟು ಕಾಳಜಿ ಇಟ್ಟುಕೊಂಡಿರುವ ಡಿ.ಕೆ.ಎಸ್ ಸಹೋದರರು ಕ್ಷೇತ್ರಕ್ಕೆ ಸಾಕಷ್ಟು ತಮ್ಮ ವೈಯಕ್ತಿಕ ನೆರವು ನೀಡಿದ್ದಾರೆ. ಕೆಲ ತಿಂಗಳ ಹಿಂದೆ ತಾಲ್ಲೂಕಿನಲ್ಲಿ ಬೀಸಿದ ಬಿರುಗಾಳಿ ಮಳೆಗೆ 5 ಸಾವಿರ ತೆಂಗಿನ ಮರ, 1 ಸಾವಿರ ಮಾವಿನ ಮರ ಧರೆಗುರುಳಿದ ಸಂದರ್ಭದಲ್ಲಿ ನಷ್ಟಕ್ಕೊಳಗಾದ ರೈತರನ್ನು ಕೈ ಹಿಡಿದಿದ್ದು ನೀವೇ ಇಲ್ಲ ಅದು ಡಿಕೆಎಸ್ ಸಹೋದರರು ಎಂದರು.
ಕೆಪಿಸಿಸಿ ಅಧ್ಯಕ್ಷರನ್ನು ನಿವೃತ್ತ ಕುದುರೆ ಎಂದು ಜರಿದಿರುವ ನೀವು ಉಪಯೋಗಕ್ಕೆ ಬಾರದ ಕುದುರೆಯಾಗಿದ್ದೀರಿ. ಆದ್ದರಿಂದಲೇ ಪ್ರಯೋಜನಕ್ಕೆ ಬಾರದ ಎಂಎಲ್ಸಿ ಸ್ಥಾನವನ್ನು ಪಡೆದಿದ್ದೀರಿ. ಡಿಕೆಶಿಯವರು ಭವಿಷ್ಯದ ಅಶ್ವಮೇಧ ಕುದುರೆ ಎಂದು ತಿಳಿಸಿದ ಅವರು,ಇದೇ ರೀತಿಯ ಕಟು ಟೀಕೆಗಳನನು ಮಾಡಿಕೊಂಡು ರಾಜಕೀಯವಾಗಿ ಸಮಾಧಿಯಾಗುತ್ತೀರಿ ಎಂದು ಭವಿಷ್ಯ ನುಡಿದರು.
ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಶಿವಮಾದು ಮಾತನಾಡಿ,ಹಲವಾರು ಬಾರಿ ಶಾಸಕರು ಸಚಿವರಾಗಿ ರಾಜಕೀಯ ಅನುಭವದ ಪ್ರಜ್ಞೆ ಹೊಂದಿರುವ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಎಂಎಲ್ಸಿಯೂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡದೆ ಸರ್ಕಾರಿ ಕಛೇರಿಯನ್ನು ದುರುಪಯೋಗಪಡಿಸಿಕೊಂಡು ಗೋಷ್ಠಿ ನಡೆಸಿರುವುದು ಎಷ್ಟು ಸರಿ ಎಂದು ಯೋಗೇಶ್ವರ್ ನಡವಳಿಕೆಗೆ ಪ್ರಶ್ನೆ ಮಾಡಿದರು.
ಭವಿಷ್ಯದ ಮುಖ್ಯಮಂತ್ರಿ ಎಂದೇ ವ್ಯಾಖ್ಯಾನಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ರವರು, ಸಚಿವರಾಗಿದ್ದ ಸಂದರ್ಭದಲ್ಲಿ ವಿದ್ಯುತ್ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳು ಕಡಿಮೆ ಸಾಧನೆಯೇ. ಕೊರೋನಾದಂತಹ ಕಠಿಣದ ಸಮಯದಲ್ಲಿ ಕ್ಷೇತ್ರದ ಮತದಾರರಿಗೆ ಹತ್ತಿರವಾದವರು. ಡಿಕೆಎಸ್ ಸಹೋದರರು ಎಂಬುದನ್ನು ಜನತೆ ಮರೆಯಬಾರದು ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಶರತ್ಚಂದ್ರ, ರಾಜ್ಯ ಕುಕ್ಕುಟೋದ್ಯಮ ಮಂಡಳಿ ಅಧ್ಯಕ್ಷ ಡಿ.ಕೆ.ಕಾಂತರಾಜ್,ನಗರ ಯುವ ಘಟಕದ ಅಧ್ಯಕ್ಷ ಮುದ್ದುಕೃಷ್ಣ, ಕೋಕಿಲರಾಣಿ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ವಕೀಲ ಟಿ.ವಿ.ಗಿರೀಶ್, ಕೆ.ಟಿ.ಲಕ್ಷö್ಮಮ್ಮ, ಎಸ್.ಸಿ.ಶೇಖರ್, ಬೋರ್ವೆಲ್ ರಂಗನಾಥ್, ಸಂಕಲಗೆರೆ ಕಿಟ್ಟಿ, ವಾಸೀಲ್ ಆಲಿಖಾನ್, ಪಿ.ಡಿ.ರಾಜು, ವೆಂಕಟೇಶ್ (ಶೇಠು) ಹಾಗೂ ಹಲವಾರು ಮಂದಿ ಹಾಜರಿದ್ದರು.