ಸುಂಟಿಕೊಪ್ಪ: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಡೆಂಗ್ಯು ಜ್ವರ ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಸಹಾಯಕರು ಮನೆ ಮನೆಗೆ ತೆರಳಿ ಮುನ್ನಚ್ಚರಿಕೆ ಕ್ರಮ ಕೈಗೊಳ್ಳುವಂತೆ ಮತ್ತು ಸ್ವಚ್ಛತೆ ಕಾಪಾಡುವಂತೆ ಆರಿವು ಮೂಡಿಸಿದರು.
ಈ ಸಂಬಂಧ ಈಗಾಗಲೇ ಗ್ರಾಮ ಪಂಚಾಯಿತಿಗೆ ಪತ್ರ ಬರೆದಿರುವ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯದ ಕೇಂದ್ರ, ಸುಂಟಿಕೊಪ್ಪದಲ್ಲಿ ಡೆಂಗ್ಯು ಪ್ರಕರಣ ಪತ್ತೆಯಾಗಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.
ಸೂಕ್ತ ಘನತ್ಯಾಜ್ಯ ವಿಲೇವಾರಿ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವುದು, ನಿಂತ ನೀರಲ್ಲಿ ಸೊಳ್ಳೆ ಉತ್ಪತ್ತಿಯಾಗುವುದರಿಂದ ನೀರು ನಿಲ್ಲದಂತೆ ಕ್ರಮವಹಿಸುವುದು, ಕಟ್ಟಡ ನಿರ್ಮಾಣ ಕಾಮಗಾರಿ ನಡೆಸುವವರಿಗೆ ನೀರು ನಿಲ್ಲದಂತೆ ಕ್ರಮ ವಹಿಸಲು ಸೂಚಿಸುವುದು. ಡೆಂಗ್ಯು ಜ್ವರದ ಬಗ್ಗೆ ಆರೋಗ್ಯ ಶಿಕ್ಷಣವನ್ನು ನೀಡುವ ಕಾರ್ಯಕ್ರಮವನ್ನು ನಡೆಸುವುದು, ಪಂಚಾಯಿತಿ ವತಿಯಿಂದ ಜ್ವರ ಪ್ರಕರಣಗಳು ಕಂಡು ಬಂದ ಬಡಾವಣೆಗಳಲ್ಲಿ ಸೊಳ್ಳೆಗಳ ನಿಯಂತ್ರಣಕ್ಕಾಗಿ ಧೂಮೀಕರಣ ಮಾಡಿಸುವುದು, ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಗಳಲ್ಲಿ ಮತ್ತು ವಾರ್ಡ್ ಸಭೆಗಳಲ್ಲಿ ಜನಪ್ರತಿನಿಧಿಗಳಿಗೆ ಹಾಗೂ ಸಾರ್ವಜನಿಕರಿಗೆ ಸ್ವಚ್ಛತೆ, ಟಯರ್ನ ಮಾಲಕರು, ಹಳೇ ಟಯರ್ ದಾಸ್ತಾನುಗಾರರು, ಟಾರು ಡ್ರಮುಗಳ ಶೇಖರಣೆ ಮಾಡುವವರು ನೀರು ಸಂಗ್ರಹವಾಗದAತೆ ಸೂಕ್ತ ಕ್ರಮ ತೆಗೆದುಕೊಳ್ಳಲು ಮತ್ತು ಸಾಂಕ್ರಾಮಿಕ ರೋಗಗಳ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ, ಜಾಗೃತಿ ಮೂಡಿಬೇಕೆಂದು ಪತ್ರದಲ್ಲಿ ತಿಳಿಸಲಾಗಿದೆ.
ಈ ನಡುವೆ ಪ್ರಾಥಮಿಕ ಆರೋಗ್ಯದ ಕೇಂದ್ರದ ಆರೋಗ್ಯ ಸಹಾಯಕರು ಮತ್ತು ಆಶಾ ಕಾರ್ಯಕರ್ತೆಯರು ಪಟ್ಟಣದ ಪ್ರತಿ ವಾರ್ಡ್ಗಳ ಮನೆ ಮನೆಗಳಿಗೆ ತೆರಳಿ ಸಮೀಕ್ಷೆ ನಡೆಸಿ, ಜನತೆಯಲ್ಲಿ ಡೆಂಗು, ಚಿಕುನ್ ಗುನ್ಯಾ, ಮಲೇರಿಯಾ, ಕ್ಷಯ ರೋಗದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.