ಸುಂಟಿಕೊಪ್ಪ: ಸೋಮವಾರದ ಬಂದ್ ಹಿನ್ನೆಲೆಯಲ್ಲಿ ಸಂತೆ ದಿನವಾದ ಭಾನುವಾರ ಸುಂಟಿಕೊಪ್ಪದಲ್ಲಿ ಕೆಲವು ತರಕಾರಿ, ಶೇಂಗಾ
ಎಣ್ಣೆ ಹಾಗೂ ದಿನಸಿ ವಸ್ತುಗಳ ಬೆಲೆ ಹೆಚ್ಚಳವಾಗಿ ಗ್ರಾಹಕರು ಬೆಲೆ ಏರಿಕೆಯ ಬಿಸಿ ಅನುಭವಿಸಿದರು.
ದೂರದ ಪಿರಿಯಪಟ್ಟಣ, ಕೊಣನೂರು, ಹಾಸನ, ಮೈಸೂರು ಭಾಗಗಳಿಂದ ತರಕಾರಿ, ಹೂ, ಹಣ್ಣು, ಬಟ್ಟೆ, ಚಪ್ಪಲಿ, ದಿನಸಿ ಸಾಮಾಗ್ರಿಗಳನ್ನು ಮಾರಾಟ ಮಾಡಲು ವರ್ತಕರು ಆಗಮಿಸಿದ್ದರೂ, ಸಂತೆಯಲ್ಲಿ ಗ್ರಾಹಕರ ಸಂಖ್ಯೆ ತೀವ್ರವಾಗಿ ಇಳಿಮುಖಗೊಂಡಿತ್ತು.
ಬೀನ್ಸ್ಗೆ ಕೆ.ಜಿ.ಗೆ 80 ರೂ, ಕ್ಯಾರೆಟ್ ಕೆಜಿಗೆ 80 ರೂ, ಟೊಮೊಟೊ ಕೆಜಿಗೆ 30 ರೂ, ಹೂಕೋಸು 60 ರೂ, ಬೀನ್ಸ್ ಕಾಳು ಕೆಜಿಗೆ 100 ರೂ, ಹಾಗಲಕಾಯಿ 80 ರೂ, ನುಗ್ಗೆ ಕಾಯಿ 80 ರೂ.ಗಳಿಗೆ ಮಾರಾಟವಾಗುತ್ತಿತ್ತು. ಶೆಂಗಾ ಎಣ್ಣೆ ಬೆಲೆ ದಿಢೀರ್ ಏರಿಕೆಯಿಂದ ಹಾಗೂ ಇತರೆ ದಿನಸಿ, ದಾನ್ಯಗಳ ಬೆಲೆ ಏರಿಕೆಯಿಂದಾಗಿ ಮೊದಲೇ ಕೊರೋನಾ ಭೀತಿಯಿಂದ ನಲುಗಿದ್ದ ಗ್ರಾಹಕರು ಸರಕಾರಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದುದು ಕಂಡು ಬಂದಿತು.
ಸೋಮವಾರ ನೀಡಿರುವ ಬಂದ್ ಕರೆಯಿಂದ ಗ್ರಾಹಕರ ಸಂಖ್ಯೆ ಅತಿ ವಿರಳವಾಗಿತ್ತು.