ಸುಂಟಿಕೊಪ್ಪ| ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಮೊಂಡುತನ: ವರ್ಷವಾದರೂ ದೊರಕದ ವಿದ್ಯುತ್ ಸಂಪರ್ಕ!

0
55

ಸುಂಟಿಕೊಪ್ಪ: ಗ್ರಾಮೀಣ ಜನರ ಪ್ರಥಮ ಸರಕಾರವೆಂದೇ ಕರೆಯಲಾಗುವ ಗ್ರಾಮ ಪಂಚಾಯಿತಿಗೆ ಗ್ರಾಮದ ಜನತೆಯ ಬೇಕುಬೇಡಿಕೆಗಳ ಬಗ್ಗೆ ನಿಖರವಾದ ಮಾಹಿತಿ ಇರುತ್ತದೆ. ಆದರೆ ಪಂಚಾಯಿತಿ ಆಡಳಿತ ಸುಸೂತ್ರವಾಗಿ ಕಾರ್ಯನಿರ್ವಹಿಸದಿದ್ದರೆ ಜನತೆ ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂಬುದಕ್ಕೆ ಉತ್ತಮ ಉದಾಹರಣೆ ಇಲ್ಲಿದೆ.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಗ್ರೇಡ್ 1 ಪಂಚಾಯಿತಿಯಾಗಿದ್ದು, ಅಭಿವೃದ್ಧಿ ಪತದತ್ತ ಸಾಗಲು ಎಲ್ಲಾ ಸಂಪನ್ಮೂಲಗಳು ಈ ಪಂಚಾಯಿತಿಗಿದೆ. ಕುಗ್ರಾಮ, ಹಾಡಿಗಳು ಇಲ್ಲಿ ಕಂಡು ಬರುವುದಿಲ್ಲ; ಆದರೆ ಜನರಿಗೆ ಮೂಲಭೂತ ಸೌಲಭ್ಯ ಒದಗಿಸಬೇಕಾದ ಪಂಚಾಯಿತಿ ಆಡಳಿತ, ಅಭಿವೃದ್ಧಿ ಅಧಿಕಾರಿಯ ಮೊಂಡುತದಿಂದ ಬೀದಿ ದೀಪ ಹಾಗೂ ಮನೆಗೆ ವಿದ್ಯುತ್ ಸಂಪರ್ಕ ಸೌಲಭ್ಯಕ್ಕಾಗಿ ಕಳೆದ ಕೆಲವು ವರ್ಷಗಳಿಂದ ಅರ್ಜಿ ಸಲ್ಲಿಸಿದ ಬಡ ಜನತೆಯ ಪಾಡು ಮಾತ್ರ ಅಯೋಮಯವಾಗಿದೆ.

ಅಧಿಕಾರಿಗಳ ಈ ಅನಾಸಕ್ತಿಯ ಪರಿಣಾಮವಾಗಿ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದು ಮಾಸಿಕ ಸರಾಸರಿ 800ರೂ.ಗಳಿಗೂ ಅಧಿಕ ಬಿಲ್ ಪಾವತಿಸುವ ದುಸ್ಥಿತಿ ಬಡ ಜನತೆಯದ್ದಾಗಿದೆ. ಸುಂಟಿಕೊಪ್ಪ-ಮಾದಾಪುರ ರಸ್ತೆಯ ಸ್ವಸ್ಥ ಶಾಲೆಯ ಬಳಿಯಲ್ಲಿ 11ಕ್ಕೂ ಅಧಿಕ ವಾಸದ ಮನೆಗಳಿವೆ. ಅವುಗಳಲ್ಲಿ 4 ಮನೆಗಳು ಒಳಭಾಗದಲ್ಲಿದ್ದು ಈ ಮನೆಗಳಿಗೆ ವಿದ್ಯುತ್ ಸಂಪರ್ಕ ಪಡೆಯಬೇಕಾದರೆ ರಸ್ತೆ ಬದಿಗೆ ಬೀದಿ ದೀಪ ಸಂಪರ್ಕ ಬರಬೇಕು. ಈ ವಿದ್ಯುತ್ ದೀಪಕ್ಕಾಗಿ ಪ್ರತಿ ಕುಟುಂಬಗಳೂ ಸಂಬಂಧಿಸಿದ ಇಲಾಖೆಗಳಿಗೆ ಅರ್ಜಿ ಸಲ್ಲಿಸುತ್ತಾ ಬರುತ್ತಿದ್ದಾರೆ.

ಸುಂಟಿಕೊಪ್ಪ ಪಂಚಾಯಿತಿಯ ಈ ಹಿಂದಿನ ಅಭಿವೃದ್ಧಿ ಅಧಿಕಾರಿ ಮೇದಪ್ಪ ಅವರು ಇವರ ಅರ್ಜಿಯನ್ನು ಪರಿಗಣಿಸಿ ಪಂಚಾಯಿತಿ ಆಡಳಿತ ಮಂಡಳಿಯಿಂದ ಅನುಮೋದನೆ ಪಡೆದು ವಿದ್ಯುತ್ ಗುತ್ತಿಗೆದಾರನಿಗೆ ಕಾಮಗಾರಿ ನಡೆಸಲು ಅನುಮತಿ ಪತ್ರ ನೀಡಿದ್ದರು.

ಆದರೆ ಆನಂತರ ಬಂದ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ‘ಸದ್ಯಕ್ಕೆ ಬೀದಿ ದೀಪ ಹಾಗೂ ವಿದ್ಯುತ್ ಕಾಮಗಾರಿ ನಡೆಸಬೇಡಿ; ಸರಕಾರದ ಕೋಟಾದಡಿ ವಿದ್ಯುತ್ ಕಂಬ ಬರಲಿದೆ’ ಎಂದು ತಿಳಿಸಿದ ಮೇರೆಗೆ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಬೀದಿ ದೀಪ ಹಾಗೂ ವಿದ್ಯುತ್ ಸಂಪರ್ಕಕ್ಕೆ ಕಾದು ಕುಳಿತ ನಾಲ್ಕು ಕುಟುಂಬಗಳು ಸೆಸ್ಕ್ ಹಾಗೂ ಪಂಚಾಯಿತಿಗೆ ಅಲೆದಲೆದು ಸುಸ್ತಾಗಿದ್ದಾರೆ. ಆದರೆ ಸರಕಾರ ವಿದ್ಯುತ್ ಸಂಪರ್ಕ ಬರಲೇ ಇಲ್ಲ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಲೂ ಇಲ್ಲ.

ಶಾಸಕರ ಆದೇಶಕ್ಕೂ ಕಿಮ್ಮತ್ತಿಲ್ಲ: ಈ ನಡುವೆ ವಿದ್ಯುತ್ ಬಳಕೆದಾರ ಫಲಾನುಭವಿಗಳು ಶಾಸಕ ಅಪ್ಪಚ್ಚು ರಂಜನ್ ಅವರ ಮೊರೆ ಹೋದ ಹಿನ್ನೆಲೆಯಲ್ಲಿ ಕಳೆದ ಸಾಲಿನ ಡಿ.20ರಂದು ಸುಂಟಿಕೊಪ್ಪ ಗ್ರಾಮ ಪಂಚಾಯಿತಿಗೆ ಪತ್ರ ಬರೆದು ಈ ಭಾಗಕ್ಕೆ ವಿದ್ಯುತ್ ಕಂಬ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಬೇಕೆಂದು ಶಾಸಕರು ಸೂಚಿಸಿದ್ದರು. ಆದರೆ ಇಲ್ಲಿನ ಅಭಿವೃದ್ಧಿ ಅಧಿಕಾರಿ ಶಾಸಕರ ಪತ್ರಕ್ಕೂ ಕವಡೆ ಕಾಸಿನ ಕಿಮ್ಮತ್ತೂ ನೀಡಿಲ್ಲ.

ಸ್ವಸ್ಥ ಶಾಲೆ ಬಳಿಯ ನಿವಾಸಿಗಳ ವಿದ್ಯುತ್ ಸಂಪರ್ಕಕ್ಕೆ ನಿಗದಿಪಡಿಲಾಗಿದ್ದ ಕಾಮಗಾರಿಯನ್ನು ಬೇರೆ ವಿಭಾಗಕ್ಕೆ ಸ್ಥಳಾಂತರಿಸಿ ಬಿಲ್ ಪಾವತಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.

ಗ್ರಾ.ಪಂ. ಆಡಳಿತ ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಾ ಕುಳಿತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕವಾಗಿದೆ.

LEAVE A REPLY

Please enter your comment!
Please enter your name here