ಸುಂಟಿಕೊಪ್ಪ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಧಿಕ ಭಾರದ ಕಂಟೈನರ್ಗಳ ಓಡಾಟದಿಂದ ರಸ್ತೆಗಳು ಹಾಳಾಗುವುದರ ಜೊತೆಗೆ ಅಲ್ಲಲ್ಲಿ ಭೂಕುಸಿತ ಉಂಟಾಗುತ್ತಿದ್ದು, ಜಿಲ್ಲಾಡಳಿತ ಇದಕ್ಕೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಕೊಡಗಿನಲ್ಲಿ ಪಕೃತಿ ವಿಕೋಪದಿಂದ ಭೂಕುಸಿತವಾಗಿದ್ದು, ಅನೇಕರು ಮನೆ, ಮಠ, ತೋಟ ಕಳೆದುಕೊಂಡಿದ್ದಾರೆ. ಈ ಮಧ್ಯೆ ಭಾರೀ ಗಾತ್ರ ಹಾಗೂ ತೂಕದ ವಾಹನಗಳ ಸಂಚಾರದಿಂದ ಮಡಿಕೇರಿಯಿಂದ ಕುಶಾಲನಗರಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಗಾಲದಲ್ಲಿ ಬೋಯಿಕೇರಿ, ಕೆದಕಲ್ 7ನೇ ಮೈಲು ಸಮೀಪ ರಸ್ತೆ ಭೂಕುಸಿತಕ್ಕೊಳಗಾಗುತ್ತಿದೆ. ಆದ್ದರಿಂದ ಒಂದೆರಡು ತಿಂಗಳು ಈ ರಸ್ತೆಯಲ್ಲಿ ವಾಹನ ಸಂಚರಿಸಲು ಸಾಧ್ಯವಾಗದು ಎಂದು ಸಾರ್ವಜನಿಕರು ಜಿಲ್ಲಾಡಳಿತದ ಗಮನಸೆಳೆದಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಕೆದಕಲ್ ಭದ್ರಕಾಳಿ ದೇವಾಲಯದ ಬಳಿ 2018ರಲ್ಲಿ ರಸ್ತೆ ಕುಸಿತಕ್ಕೊಳಗಾದ ಜಾಗದಲ್ಲಿ ತಾತ್ಕಾಲಿಕವಾಗಿ ಮರಳಿನ ಚೀಲದ ತಡೆಗೋಡೆ ನಿರ್ಮಿಸಲಾಗಿದೆ. ಆದರೆ ಭೂ ಸಾರಿಗೆ ಇಲಾಖೆ ಇದುವರೆಗೂ ಶಾಶ್ವತ ಕಾಮಗಾರಿ ನಡೆಸದೇ ಇರುವುದರಿಂದ ಮಳೆ ಆರ್ಭಟ ಹೆಚ್ಚಾದಾಗ ಮತ್ತೆ ರಸ್ತೆ ಕುಸಿಯುವ ಸಾಧ್ಯತೆ ಇದೆ. ಕಂಟೈನರ್ ಹಾಗೂ ದೊಡ್ಡ ಲಾರಿಗಳಲ್ಲಿ ನಿಗದಿತ ತೂಕಕ್ಕಿಂತ ಅಧಿಕ ತೂಕದ ಸಾಮಾಗ್ರಿಗಳನ್ನು ತುಂಬಿಸಿ ಮಂಗಳೂರು-ಬೆಂಗಳೂರಿಗೆ ಪ್ರತಿ ನಿತ್ಯ ಸಾಗಿಸುತ್ತಿರುವುದರಿಂದ ರಸ್ತೆಗೆ ಅಪಾಯ ಕಟ್ಟಿಟ್ಟ ಬುತ್ತಿ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಈಗಲೇ ಕ್ರಮ ಕೈಗೊಳ್ಳುವಂತಾಗಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ