ಸುಂಟಿಕೊಪ್ಪ: ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸರಕಾರಕ್ಕೆ ನೀಡಿರುವ ಮನವಿಗೆ ಯಾವುದೇ ಸ್ಪಂದನ ದೊರಕದ ಹಿನ್ನೆಲೆಯಲ್ಲಿ ಗುತ್ತಿಗೆ ಆಯುಷ್ ವೈದ್ಯರು ರಾಜ್ಯಾದ್ಯಂತ ಸಾಮೂಹಿಕವಾಗಿ ತಮ್ಮ ಸೇವೆಯನ್ನು ಸ್ಥಗಿತೊಳಿಸಲು ನಿರ್ಧರಿಸಿದ್ದಾರೆ.
ಆಯುಷ್ ಶಿಷ್ಯ ವೇತನ ತಾರತಮ್ಯ ನೀತಿಯನ್ನು ಸರಿಪಡಿಸುವಂತೆ ಹಾಗೂ ಆಯುಷ್ ವೈದ್ಯರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗುತ್ತಿಗೆ ಆಯುಷ್ ವೈದ್ಯರು ಮೇ ೫ರಿಂದ ಸಾಂಕೇತಿಕವಾಗಿ ಕಪ್ಪುಪಟ್ಟಿ ಧರಿಸಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಈ ಸಂದರ್ಭ ಸರಕಾರಕ್ಕೆ ಸಲ್ಲಿಸಲಾದ ಮನವಿಗೆ ಯಾವುದೇ ಸ್ಪಂದನ ದೊರಕದಿರುವುದರಿಂದ ಶನಿವಾರ ಕೊಡಗು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಜಿಲ್ಲೆಯ ಆಯುಷ್ ವೈದ್ಯರು ಮನವಿ ಪತ್ರ ಸಲ್ಲಿಸುವದರೊಂದಿಗೆ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ.
ರಾಜ್ಯ ಸರ್ಕಾರವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಯುಷ್ ವೈದ್ಯರಿಗೆ ತುರ್ತು ಸಂದರ್ಭಗಳಲ್ಲಿ ಅಲೋಪತಿ ಔಷಧಿಗಳನ್ನು ನೀಡಲು ಅನುಮತಿ ನೀಡಲಾಗಿದೆ. ಸರ್ಕಾರಿ ಆಯುಷ್ ವೈದ್ಯರಿಗೆ ನೀಡಿರುವ ಆದೇಶವನ್ನು ಖಾಸಗಿ ಆಯುಷ್ ವೈದ್ಯರಿಗೂ ವಿಸ್ತರಿಸಬೇಕು ಎಂಬ ಬೇಡಿಕೆ ನಮ್ಮದಾಗಿದೆ.
ಆಯುಷ್ ವೈದ್ಯರ ವೇತನ ಹೆಚ್ಚಿಸುವ ಕುರಿತು ಈಗಾಗಲೆ ಮನವಿ ಪತ್ರಗಳನ್ನು ನೀಡಿದ್ದು, ಸರಕಾರ ಸ್ಪಂದಿಸಿಲ್ಲ. ಶಿಷ್ಯ ವೇತನದಲ್ಲೂ ಸಹ ಆಯುಷ್ ವಿದ್ಯಾರ್ಥಿಗಳಿಗೆ ಅತ್ಯಂತ ಕಡಿಮೆ ಶಿಷ್ಯ ವೇತನ ನೀಡುತ್ತಿದ್ದು, ಮನವಿಯನ್ನು ಹಲವು ಬಾರಿ ನೀಡಲಾಗಿದ್ದರೂ ಸರಕಾರ ಪರಿಗಣಿಸದಿರುವುದು ವಿಷಾದನೀಯ ಎಂದು ಆಯುಷ್ ವೈದ್ಯ ಡಾ.ಪ್ರಾಣೇಶ್ ದೂರಿದರು.
ತಮ್ಮ ಬೇಡಿಕೆ ಈಡೇರುವವರೆಗೆ ಸೇವೆ ಸ್ಥಗಿತಗೊಳಿಸುವ ಮುಷ್ಕರದಲ್ಲಿ ಪಾಲ್ಗೊಳ್ಳುವ ಕುರಿತು ವೈದ್ಯರು ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭ ಡಾ. ಆರ್ಚನಾ, ಡಾ. ಭರತ್, ಡಾ. ಪೂಜಿತಾ ಮತ್ತಿತರರು ಇದ್ದರು.