Thursday, January 28, 2021

Latest Posts

ಸುಖಾಸುಮ್ಮನೆ ಹೇಳಿಕೆ ನೀಡುವ ಬದಲು ಡಿಕೆಶಿ ವಿಡಿಯೋ ದಾಖಲೆಗಳನ್ನು ನೀಡಲಿ: ಆರ್. ಅಶೋಕ್

 ಹೊಸ ದಿಗಂತ ವರದಿ ಪೊನ್ನಂಪೇಟೆ:

ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಅವರ ಆತ್ಮಹತ್ಯೆ ಯತ್ನ ಪ್ರಕರಣ ಸಂಬಂಧ ಸುಖಾಸುಮ್ಮನೆ ಹೇಳಿಕೆ ನೀಡುವ ಬದಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಬಳಿ ಇರುವ ವಿಡಿಯೊ ದಾಖಲೆಗಳನ್ನು ನೀಡಲಿ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಪೊನ್ನಂಪೇಟೆ ನೂತನ ತಾಲೂಕು ಉದ್ಘಾಟನೆಗೆ ಇಲ್ಲಿಗೆ ಆಗಮಿಸಿದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿ, ಶಿವಕುಮಾರ್ ಅವರು ಸುಮ್ಮನೆ ಹೇಳಿಕೆ ಕೊಡುವುದು ಸರಿಯಲ್ಲ. ಅವರಿಗೆ ಹೇಳಿಕೆ ನೀಡುವ ಚಟವಿದ್ದು,ಪ್ರಕರಣವನ್ನು ರಾಜಕೀಯಕ್ಕೆ ಬಳಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಸಂತೋಷ್ ಆತ್ಮಹತ್ಯೆ ಯತ್ನ ಅವರ ವೈಯಕ್ತಿಕ ವಿಚಾರವಾಗಿದ್ದು,ಪಕ್ಷ ಅಥವಾ ಸರ್ಕಾರಕ್ಕೆ ಯಾವುದೇ ರೀತಿಯಲ್ಲೂ ಸಂಬಂಧವಿಲ್ಲ. ಡಿ.ಕೆ.ಶಿವಕುಮಾರ್ ಆಡಿಯೊ, ವಿಡಿಯೊ ಇದೆ ಎಂದು ಹೇಳಿಕೆ ನೀಡುತ್ತಿದ್ದು, ನಿಜವಾಗಿಯೂ ಅವರ ಬಳಿ ಅವುಗಳು ಇದ್ದಲ್ಲಿ ತನಿಖಾಧಿಕಾರಿಗಳಿಗೆ ನೀಡಲಿ ಎಂದು ಸವಾಲು ಹಾಕಿದರು.
ನಾಯಕತ್ವ ಬದಲಾವಣೆಯಿಲ್ಲ: ರಾಜ್ಯ ಬಿಜೆಪಿಯಲ್ಲಾಗಲಿ, ಸರಕಾರದಲ್ಲಾಗಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ.ಬಿ.ಎಸ್. ಯಡಿಯೂರಪ್ಪ ಇನ್ನೂ ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಉಳಿಯಲಿದ್ದು, ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ನಾನೂ ದೆಹಲಿಗೆ ಹೋಗಿದ್ದೆ. ಅಲ್ಲಿಯೂ ನಾಯಕತ್ವ ಬದಲಾವಣೆ ಕುರಿತು ಯಾವುದೇ ಬೆಳವಣಿಗೆ ನಡೆದಿಲ್ಲ ಎಂದು ತಿಳಿಸಿದರು.

ಬಿಜೆಪಿ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿದ್ದು, ಶಂಕರ್, ಮುನಿರತ್ನ ಹಾಗೂ ಎಂ.ಟಿ.ನಾಗರಾಜ್ ಅವರಿಗೂ ಮಂತ್ರಿ ಸ್ಥಾನ ಸಿಗಲಿದೆ ಎಂದು ನುಡಿದರು.

ಸಚಿವ ಡಾ. ನಾರಾಯಣ ಗೌಡ ಮಾತನಾಡಿ, ಸಂತೋಷ್ ಅವರು ಆತ್ಮಹತ್ಯೆಗೆ ಯತ್ನಿಸಿಲ್ಲ. ಔಷಧಿ ವ್ಯತಿರಿಕ್ತ ಪರಿಣಾಮ ಬೀರಿದ್ದರಿಂದ ಅಸ್ವಸ್ಥಗೊಂಡಿದ್ದರು. ಅವರು ಗುಣಮುಖರಾಗುತ್ತಿದ್ದಾರೆ. ನಾನೂ ಸಹ ಅವರ ಆರೋಗ್ಯ ವಿಚಾರಿಸಿದ್ದೇನೆ ಎಂದು ಹೇಳಿದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!