ಉಡುಪಿ: ಜಿಲ್ಲೆಯಿಂದ ಮಾದರಿ ಕಳುಹಿಸಿದ ಕೋವಿಡ್ ಪರೀಕ್ಷೆಯ ವರದಿ ಬರಲು ಇಷ್ಟು ದಿನಗಳ ಕಾಲ ವಿಳಂಬವಾಗುತ್ತಿದ್ದರೆ, ಇನ್ನು ಮುಂದೆ ಆ ಸುದೀರ್ಘ ಕಾಯುವಿಕೆ ಇರುವುದಿಲ್ಲ!
ಇಂದಿನಿಂದ ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಯ ಹೆಚ್ಚು ಹೆಚ್ಚು ವರದಿಗಳು ಕೈಸೇರುವ ವಿಶ್ವಾಸ ಆರೋಗ್ಯ ಇಲಾಖಾಧಿಕಾರಿಗಳಲ್ಲಿದ್ದರೆ, 4500ಕ್ಕೂ ಅಧಿಕ ಜನರ ವರದಿಗಳು ಬಾಕಿ ಇರುವುದರಿಂದ ಸೋಂಕಿತರ ಸಂಖ್ಯೆ ಏರಿಕೆಯಾಗುವ ಆತಂಕವೂ ಜೊತೆಯಾಗಿದೆ.
ಹೊರ ರಾಜ್ಯ ಮತ್ತು ದೇಶಗಳಿಂದ ಬಂದವರು, ಕೋವಿಡ್ ಸೋಂಕಿತರ ಸಂಪರ್ಕದಲ್ಲಿದ್ದವರು, ತೀವ್ರ ಉಸಿರಾಟದ ಸಮಸ್ಯೆ, ಶೀತ ಜ್ವರ… ಹೀಗೆ ಕಳೆದ ನಾಲ್ಕೈದು ದಿನಗಳಿಂದ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಗಂಟಲ ದ್ರವದ ಮಾದರಿಗಳನ್ನು ಕೋವಿಡ್ ಪರೀಕ್ಷೆ ನಡೆಸಲು ಪ್ರಯೋಗಾಲಯಗಳಿಗೆ ಕಳುಹಿಸಲಾಗುತ್ತಿದೆ. ಆದರೆ ಪ್ರತಿನಿತ್ಯ ವರದಿಗಳು ದೊರೆಯುತ್ತಿರುವ ಸಂಖ್ಯೆ 400-450 ಮಾತ್ರ.
ಶಿವಮೊಗ್ಗಕ್ಕೂ ಮಾದರಿ ರವಾನೆ: ಜಿಲ್ಲೆಯ ಮಣಿಪಾಲದಲ್ಲಿ ತೆರೆದಿರುವ ಕೋವಿಡ್ ಪರೀಕ್ಷಾ ಕೇಂದ್ರದ ಸಾಮರ್ಥ್ಯ ಹೆಚ್ಚಿಸುತ್ತಿರುವುದು ಒಂದೆಡೆಯಾದರೆ, ಜಿಲ್ಲೆಯಿಂದ ವಿವಿಧ ಪ್ರಯೋಗಾಲಯಗಳಿಗೆ ಮಾದರಿಗಳನ್ನು ಕಳುಹಿಸಲಾಗುತ್ತಿದೆ. ಮಂಗಳೂರಿನ ವೆನ್ಲಾಕ್, ಯೆನೆಪೋಯ, ಫಾದರ್ ಮುಲ್ಲರ್ಸ್ ಆಸ್ಪತ್ರೆಗಳಲ್ಲಿರುವ ಕೋವಿಡ್ ಪರೀಕ್ಷಾ ಕೇಂದ್ರಗಳಿಗೆ ಮಾದರಿಗಳು ರವಾನೆಯಾಗುತ್ತಿವೆ. ಇದೀಗ ಶಿವಮೊಗ್ಗ ಜಿಲ್ಲೆಯಲ್ಲಿ ಹೊಸದಾಗಿ ತೆರೆದಿರುವ ಪ್ರಯೋಗಾಲಯಕ್ಕೂ ಗಂಟಲ ದ್ರವ ಮಾದರಿಗಳನ್ನು ಕಳುಹಿಸಲಾಗುತ್ತಿದೆ.
ಶಿವಮೊಗ್ಗದ ಹೊಸ ಪ್ರಯೋಗಾಲಯದಲ್ಲಿ ನಮ್ಮ ಜಿಲ್ಲೆಯ ಮಾದರಿಗಳ ಪರೀಕ್ಷೆ ನಡೆಸಿ, ಇವತ್ತಿನಿಂದ ವರದಿ ಕೊಡುತ್ತೇವೆ ಎಂದು ಹೇಳಿದ್ದಾರೆ. ಅದೇ ರೀತಿ ಬೇರೆ ಜಿಲ್ಲೆಯ ಪ್ರಯೋಗಾಲಯಗಳನ್ನು ಸಂಪರ್ಕಿಸಲಾಗುತ್ತಿದೆ. ಇವತ್ತಿಂದ ಹೆಚ್ಚು ವರದಿಗಳು ಬರಲಿವೆ, ಮಾದರಿಗಳ ಸಂಖ್ಯೆ ಜಾಸ್ತಿ ಇರುವುದರಿಂದ, ಕೋವಿಡ್ ಪ್ರಕರಣಗಳು ಕೂಡ ಸಹಜವಾಗಿ ಅಧಿಕವಾಗಬಹುದು ಎಂದು ಡಿಎಚ್ಒ ಡಾ. ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.