Monday, August 15, 2022

Latest Posts

ಸುದೀರ್ಘ ರಜೆಯಲ್ಲಿ ತೆರಳಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್!

ಹೊಸದಿಗಂತ ವರದಿ,ಕೊಡಗು:

ಕಳೆದ ಎರಡು ವರ್ಷಗಳಿಂದ ಕೊಡಗು ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಜನಮೆಚ್ಚುಗೆಗೆ ಪಾತ್ರರಾಗಿದ್ದ ಅನೀಸ್ ಕಣ್ಮಣಿ ಜಾಯ್ ಅವರು ಜ. 15 ರಿಂದ ಸುದೀರ್ಘ ರಜೆಯಲ್ಲಿ ಅಮೆರಿಕಾಕ್ಕೆ ತೆರಳುತ್ತಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಅವರನ್ನು ಅಭಿನಂದಿಸಿ ಬೀಳ್ಕೊಡಲಾಯಿತು.

ನಗರದ ಜಿ.ಪಂ.ಭವನದಲ್ಲಿ ಫಲತಾಂಬೂಲ, ಶಾಲು ನೀಡಿ ಆತ್ಮೀಯವಾಗಿ ಜಿಲ್ಲಾಧಿಕಾರಿ ಅವರನ್ನು ಗೌರವಿಸಲಾಯಿತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅನೀಸ್ ಕಣ್ಮಣಿ ಜಾಯ್ ಅವರು, ಕೊಡಗು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುವುದು ದೊಡ್ಡ ಅನುಭವ ನೀಡಿದೆ. ಈ ಹಿಂದೆ ತುಮಕೂರು ಜಿಲ್ಲೆಯಲ್ಲಿ ಸಿಇಒ ಹಾಗೂ ಬೀದರ್ ಜಿಲ್ಲೆಯಲ್ಲಿ ಉಪ ವಿಭಾಗಾಧಿಕಾರಿಯಾಗಿ ನಿರ್ವಹಿಸಿದ ಕರ್ತವ್ಯಕ್ಕಿಂತ ಕೊಡಗು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಿದ್ದು ವಿಭಿನ್ನ ಹಾಗೂ ವಿಶಿಷ್ಟವಾಗಿತ್ತು ಎಂದು ವರ್ಣಿಸಿದರು.

ಜಿಲ್ಲಾಧಿಕಾರಿಯಾಗಿ ಬಂದ ನಂತರದ ಒಂದು ವರ್ಷದಲ್ಲಿ ರಜೆ ಪಡೆದಿದ್ದು ಕಡಿಮೆ, ಕೊಡಗು ಜಿಲ್ಲೆಯೇ ಜೀವನ ಮತ್ತು ಕೆಲಸವಾಗಿತ್ತು, ಎಲ್ಲರ ಸಹಕಾರದಿಂದ ಹಲವು ಕಾರ್ಯಗಳನ್ನು ನಿಭಾಯಿಸಲು ಸಹಾಯವಾಯಿತು ಎಂದರು. ‘ಕೊಡಗು ಜಿಲ್ಲೆ ಬಿಟ್ಟು ಹೋಗಲು ಮನಸ್ಸು ಬರುತ್ತಿಲ್ಲ, ಆದರೂ ತುಂಬಾ ಅಲೋಚನೆ ಮಾಡಿ ರಜೆಯಲ್ಲಿ ಅಮೆರಿಕಾಕ್ಕೆ ಕುಟುಂಬದ ಜತೆ ತೆರಳುತ್ತಿದ್ದೇನೆ’ ಎಂದು ಭಾವುಕರಾದರು.

ಕೊಡಗು ಜಿಲ್ಲೆಯಲ್ಲಿ ಪ್ರತಿಯೊಂದು ಇಲಾಖೆಯವರು ತಂಡವಾಗಿ ಕಾರ್ಯನಿರ್ವಹಿಸಿದ್ದರಿಂದ ಜಿಲ್ಲಾಡಳಿತಕ್ಕೆ ಮತ್ತು ವೈಯಕ್ತಿಕವಾಗಿಯೂ ಒಳ್ಳೆಯ ಹೆಸರು ಪಡೆಯಲು ಸಾಧ್ಯವಾಯಿತು ಎಂದ ಅವರು ಮುಂದಿನ ಜಿಲ್ಲಾಧಿಕಾರಿಗೂ ಇದೇ ರೀತಿಯ ಸಹಕಾರ ನೀಡಿ ಎಂದು ಕೋರಿದರು.

ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ ಅವರು, ಜಿಲ್ಲಾಧಿಕಾರಿ ಅವರು ತಂಡದ ನಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಯಾವುದೇ ರೀತಿಯ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸುತ್ತಿದ್ದರು ಎಂದರು.
ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪ ಅವರು, ಜಿಲ್ಲಾಧಿಕಾರಿ ಅವರು ಹೆಸರಿಗಷ್ಟೇ ಕಣ್ಮಣಿಯಾಗಿರಲಿಲ್ಲ, ಅವರು ಕೊಡಗಿನ ಕಣ್ಮಣಿಯಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಬಣ್ಣಿಸಿದರು.

ಕೃಷಿ ಇಲಾಖೆಯ ಉಪ ನಿರ್ದೇಶಕ ರಾಜು ಅವರು, ಜಿಲ್ಲಾಧಿಕಾರಿಯವರು ಅತ್ಯಂತ ವಿಭಿನ್ನ, ಅವಿಸ್ಮರಣೀಯ ವ್ಯಕ್ತಿತ್ವ ಹಾಗೂ ತಾಯಿ ಹೃದಯ ಗುಣವನ್ನು ಹೊಂದಿದ್ದರು ಎಂದು ವರ್ಣಿಸಿದರು. ಡಿಎಚ್ಒ ಡಾ.ಕೆ.ಮೋಹನ್ ಅವರು ಕೋವಿಡ್-19ನಿಯಂತ್ರಣಕ್ಕೆ ತುಂಬಾ ಶ್ರಮವಹಿಸಿದ್ದಾರೆ. ಅಧಿಕಾರಿಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಸಹಕಾರ ನೀಡಿದ್ದಾರೆ ಎಂದರು.

ಪೌರಾಯುಕ್ತ ರಾಮದಾಸ್ ಮಾತನಾಡಿ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಮನೆ ನಿರ್ಮಿಸಲು ಒಂದು ಎಕರೆ ಉತ್ತಮ ಜಾಗ ಹಾಗೂ ಕಸ ವಿಲೇವಾರಿಗೆ 10 ಎಕರೆ ಭೂಮಿ ನೀಡಿದ್ದು, ನಗರದ ಜನತೆ ಮರೆಯುವಂತಿಲ್ಲ ಎಂದು ವರ್ಣಿಸಿದರು.

ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್, ಐಟಿಡಿಪಿ ಅಧಿಕಾರಿ ಶಿವಕುಮಾರ್, ಅಗ್ನಿಶಾಮಕ ಅಧಿಕಾರಿ ಚಂದನ್, ಡಿಡಿಪಿಐ ಮಚ್ಚಾಡೊ ಇತರರು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಕರ್ತವ್ಯ ನಿರ್ವಹಣೆ ಬಗ್ಗೆ ಗುಣಗಾನ ಮಾಡಿದರು. ಇದೇ ಸಂದರ್ಭದಲ್ಲಿ ಕೊಡಗು ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಹೊರತರಲಾಗಿರುವ ಕ್ಯಾಲೆಂಡರ್ ಅನ್ನು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಬಿಡುಗಡೆ ಮಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss