ಸುದ್ದಿಗಳು ಪರಾಮರ್ಶಿತ ಪತ್ರಿಕೆಗಳು ಸುರಕ್ಷಿತ

0
24

ಪ್ರಿಯ ಓದುಗರೆ,
ದಿನ ಪತ್ರಿಕೆಗಳು, ನಿಯತಕಾಲಿಕೆಗಳು ನಾಗರಿಕ ಜಗತ್ತಿನ ಅವಿಭಾಜ್ಯ ಅಂಗ. ಸ್ವಾತಂತ್ರ್ಯ ಹೋರಾಟದಿಂದ ಇವತ್ತಿನ ಕೊರೋನಾ ಆಪತ್ತಿನ ತನಕ ಜನರಿಗೆ ಅಗತ್ಯ-ಅಧಿಕೃತ ಸುದ್ದಿ ಮುಟ್ಟಿಸುವಲ್ಲಿ, ಜಾಗೃತಿ ಮೂಡಿಸುವಲ್ಲಿ ದಿನಪತ್ರಿಕೆಗಳ ಪಾತ್ರ ಮಹತ್ವದ್ದು. ಅರವತ್ತರ ದಶಕದಲ್ಲಿ ಹರಡಿದ ಪ್ಲೇಗ್‌ನಿಂದ ಕೊರೋನಾ ತನಕ ಹತ್ತು ಹಲವು ಸವಾಲು, ಸಂಕಷ್ಟಗಳನ್ನು ಎದುರಿಸಿ ದಿನ ಪತ್ರಿಕೆಗಳು ಮುಂದಡಿ ಇಟ್ಟಿವೆ. ನಾಳಿನ ಒಳಿತಿಗಾಗಿ ಇಡೀ ದೇಶವೇ ಭಾನುವಾರ ಜನತಾ ಕರ್ಪ್ಯೂಗೆ ಓಗೊಟ್ಟಿದೆ. ಇನ್ನು ಹಲವು ದಿನ ರಾಜ್ಯದಲ್ಲಿ ಜನತಾ ಕರ್ಫ್ಯೂ ಮುಂದುವರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ನಮ್ಮ ಜೀವ ಹಾಗೂ ದೇಶದ ಹಿತ ರಕ್ಷಣೆಗಾಗಿ ನಾವೆಲ್ಲರೂ ಸರ್ಕಾರದ ಆದೇಶ ಪಾಲಿಸಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವೈದ್ಯ ಸಮೂಹ, ಮಿಲಿಟರಿ, ಪೊಲೀಸ್ ಸಮೂಹದ ಜತೆ ಮಾಧ್ಯಮದವರನ್ನೂ ‘ಅಗತ್ಯ ಸೇವಕ’ರೆಂದು ಘೋಷಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ದಿಲ್ಲಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತಿತರ ರಾಜ್ಯಗಳ ಮುಖ್ಯಮಂತ್ರಿಗಳೂ ಈ ವ್ಯಾಖ್ಯಾನಕ್ಕೆ ಸಹಮತ ವ್ಯಕ್ತಪಡಿಸಿ ಮಾಧ್ಯಮವನ್ನು ಅಗತ್ಯ ಸೇವೆಗಳ ಪಟ್ಟಿಗೆ ಸೇರಿಸಿದ್ದಾರೆ. ಯುದ್ಧ, ಅತಿವೃಷ್ಟಿ, ಅನಾವೃಷ್ಟಿಯಂಥ ವಿಷಮ ಸಂದರ್ಭಗಳಲ್ಲೂ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುವುದು ಮಾಧ್ಯಮದ ಜಯಮಾನ ಮತ್ತು ಕರ್ತವ್ಯ. ಆದರೆ ಕೊರೋನಾದಂತಹ ಮಾರಣಾಂತಿಕ ಕಾಯಿಲೆ ಸಂದರ್ಭದಲ್ಲಿ ಕೇವಲ ಕೆಚ್ಚು ಇದ್ದರೆ ಸಾಲದು, ಮುನ್ನೆಚ್ಚರಿಕೆಯೂ ಬೇಕು. ಈಗಾಗಲೇ ನಮ್ಮ ಪತ್ರಿಕಾಲ ಯಗಳು, ಪ್ರಿಂಟಿಂಗ್ ಪ್ರೆಸ್‌ಗಳಲ್ಲಿ ಸಾಧ್ಯವಿರುವ ಎಲ್ಲ ಸುರಕ್ಷಾ ಕ್ರಮಗಳನ್ನು ಪಾಲಿಸಲಾಗುತ್ತಿದೆ. ಪತ್ರಿಕೆಗಳಿಂದ ಯಾವುದೇ ಮಾರಣಾಂತಿಕ ವೈರಸ್ ಹರಡಿದ ಒಂದೇ ಒಂದು ಉದಾಹರಣೆ ಇಲ್ಲ. ಅದಕ್ಕಿಂತ ಮುಖ್ಯವಾಗಿ, ಆತಂಕದ ಸಮಯದಲ್ಲಿ ಖಚಿತ ಮಾಹಿತಿಯನ್ನು ಕೊರೋನಾದಂತಹ ತುರ್ತು ಸಂದರ್ಭಗಳಲ್ಲಿ ಪಡೆಯುವ ಮಾಧ್ಯಮವೆಂದರೆ ಅವು ಪತ್ರಿಕೆಗಳು.

ಸಾಮಾಜಿಕ ತಾಣಗಳು ಸುಳ್ಳು ಸುದ್ದಿ ಹರಡುತ್ತಿರುವ ಇಂತಹ ಸಂದರ್ಭಗಳಲ್ಲಿ ಖಚಿತ, ವಿಶ್ವಾಸಾರ್ಹ, ಪರಾಮರ್ಶೆ ಮಾಡಿದ ಸುದ್ದಿಗಳನ್ನು ಪಡೆಯುವ ಸುರಕ್ಷಿತ ಮಾರ್ಗ ಪತ್ರಿಕೆಯಲ್ಲದೆ ಬೇರೆ ಯಾವುದಿದೆ? ಹೀಗಾಗಿ ಪತ್ರಕರ್ತರು, ಮುದ್ರಣ ತಂತ್ರಜ್ಞರು, ನಿಮ್ಮ ಮನೆ ಬಾಗಿಲಿಗೆ ಮಳೆ, ಗಾಳಿ, ಚಳಿಗೆ ಕ್ಯಾರೆ ಎನ್ನದೆ ಪತ್ರಿಕೆ ಹೊತ್ತು ತರುವ ವಿತರಣಾ ಸೇನಾನಿಗಳು ‘ಅಗತ್ಯ ಸೇವೆ’ಗೆ ಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ. ವದಂತಿಗಳಿಗೆ ಕಿವಿಗೊಡಬೇಡಿ. ನಾವು ನೀವು ಸೇರಿ ಯುದ್ಧ ಮತ್ತು ಶಾಂತಿಯ ಕಾಲಗಳೆರಡರಲ್ಲೂ ಮನು ಕುಲದ ಹಿತ ಕಾಯುವ ಕೆಲಸ ಮಾಡೋಣ. ಕೊರೋನಾ ಮಣಿಸೋಣ, ದೇಶವನ್ನು ಗೆಲ್ಲಿಸೋಣ. ಮುದ್ರಣ ಒಂದು ಪ್ರಮಾಣ, ಸುದ್ದಿ ಮಾಧ್ಯಮ ಒಂದು ಹೊಣೆಗಾರಿಕೆ.

ಸಂಪಾದಕರು

ಹೊಸ ದಿಗಂತ, ಕನ್ನಡಪ್ರಭ, ಪ್ರಜಾವಾಣಿ, ವಿಜಯ ಕರ್ನಾಟಕ
ವಿಜಯವಾಣಿ, ವಿಶ್ವವಾಣಿ, ಉದಯವಾಣಿ, ಸಂಯುಕ್ತ ಕರ್ನಾಟಕ.

 

LEAVE A REPLY

Please enter your comment!
Please enter your name here