ಹೊಸದಿಗಂತ ಆನ್ಲೈನ್ ಡೆಸ್ಕ್:
ಕಾಸರಗೋಡಿನ ಬೇಕಲ ಠಾಣಾ ವ್ಯಾಪ್ತಿಯಲ್ಲಿ ೨೦೧೮ ರಲ್ಲಿ ನಡೆದ ಮಹಿಳೆಯೋರ್ವರ ಕೊಲೆ ಪ್ರಕರಣದ ಆರೋಪಿಯ ಪತ್ತೆಗಾಗಿ ಪೊಲೀಸರು ಲುಕ್ ಔಟ್ ನೋಟಿಸ್ ಬಿಡುಗಡೆಗೊಳಿಸಿದ್ದಾರೆ.
ಕೊಲೆ ಆರೋಪಿಯಾಗಿರುವ ಸುಳ್ಯದ ಅಬ್ದುಲ್ ಅಝೀಜ್ ಎ. (33) ಎಂಬಾತನ ಸುಳಿವು ನೀಡುವವರಿಗೆ ಪೊಲೀಸರು ಎರಡು ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ. ಈತ ಆಯಂಬಾರದಲ್ಲಿ ನಡೆದ ಸುಬೈದಾ ಎಂಬ ಮಹಿಳೆಯ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. 2018ರ ಜನವರಿ 19ರಂದು ಈ ಘಟನೆ ಬೆಳಕಿಗೆ ಬಂದಿದ್ದು, ಹಂತಕ ಮಹಿಳೆಯನ್ನು ಕೊಲೆಗೈದು ಬಳಿಕ ಚಿನ್ನಾಭರಣ ದೋಚಿದ್ದ. ಇದಾದ ಈತನನ್ನು ಬಂಧಿಸಿದ್ದ ಪೊಲೀಸರು 2018ರ ಸೆ.14ರಂದು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಕರೆದುಕೊಂಡು ಬರುತ್ತಿದ್ದಾಗ ಆತ ಸುಳ್ಯ ಕೆಎಸ್ಆರ್ಟಿಸಿ ಬಸ್ಸು ನಿಲ್ದಾಣದಿಂದ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ.