Tuesday, July 5, 2022

Latest Posts

ಸುಭಿಕ್ಷ ಕೇರಳಂ ಯೋಜನೆ: ಕೃಷಿ ಉತ್ಪನ್ನಗಳ ಮಾರಾಟಕ್ಕೆ ವಿಶೇಷ ಮೊಬೈಲ್ ಆಪ್ ರಚನೆ

ಕಾಸರಗೋಡು: ಸಮಸ್ತ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆಯು ಸದಾ ವಿನೂತನ ಮಾರ್ಗಗಳನ್ನು ಅನುಸರಿಸುತ್ತಿದೆ. ಮಧ್ಯವರ್ತಿಗಳಿಲ್ಲದೆ ಉತ್ತಮ ಗುಣಮಟ್ಟದ ಕೃಷಿ ಉತ್ಪನ್ನಗಳನ್ನು ಕೃಷಿಕರು ನೇರವಾಗಿ ಗ್ರಾಹಕರಿಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಈ ಕಾರ್ಯ ಯೋಜನೆಗಳು ಮುಂದುವರಿಯುತ್ತಿವೆ. ಇದರ ಅಂಗವಾಗಿ ವಿಶೇಷ ಮೊಬೈಲ್ ಆಪ್ ಸಿದ್ಧವಾಗಿದೆ.
ಸುಭಿಕ್ಷ ಕೆಎಸ್ ಡಿ ಎಂಬ ಹೆಸರಿನ ಈ ಆಪ್ ಶೀಘ್ರದಲ್ಲೇ ಅನಾವರಣಗೊಳ್ಳಲಿದೆ. ಸುಭಿಕ್ಷ ಆಪ್ ಜಾರಿಗೊಳ್ಳುವ ಮೂಲಕ ಜಿಪಿಎಸ್ ಸೌಲಭ್ಯ ಬಳಸಿ ಗ್ರಾಹಕರು ನೇರವಾಗಿ ಕೃಷಿಕರಿಂದ ತರಕಾರಿ ಸಹಿತ ವಿವಿಧ ಕೃಷಿ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಅಧ್ಯಕ್ಷರಾಗಿರುವ ಸುಭಿಕ್ಷ ಕೇರಳಂ ಕೋರ್ ಸಮಿತಿಯ ನೇತೃತ್ವದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಆಸಕ್ತ ಹಾಲು ಉತ್ಪಾದಕ ಸಂಘಗಳು ಸ್ಥಳೀಯ ಕೃಷಿಕರಿಂದ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಿ ಮಾರಾಟ ನಡೆಸುವ ಯೋಜನೆ ಬಗ್ಗೆಯೂ ನಿರ್ಧರಿಸಲಾಗಿದೆ. ಓಲಾಟ್ ಎಂಬಲ್ಲಿ ಈ ಸಂಬಂಧ ಸ್ಟಾಲ್ ಒಂದನ್ನು ಜಿಲ್ಲಾಧಿಕಾರಿ ಉದ್ಘಾಟಿಸಿರುವುದು ಈ ಕುರಿತಾದ ಯೋಜನೆಯ ಆರಂಭವಾಗಿದೆ.
ರಾಜ್ಯದಲ್ಲೇ ಪ್ರಥಮ ಬಾರಿಗೆ ಜಿಲ್ಲಾಡಳಿತವೊಂದು ನೇರವಾಗಿ ಇಂತಹ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಕಾಸರಗೋಡು ಜಿಲ್ಲೆಯ ಆರು ಬ್ಲಾಕ್ ಪಂಚಾಯತ್ ಗಳಲ್ಲೂ ಕೃಷಿಕೋತ್ಪಾದಕ ಕಂಪೆನಿಗಳನ್ನು ರಚಿಸಲಾಗುವುದು. ಮೊದಲ ಹಂತದಲ್ಲಿ ಪರಪ್ಪ , ನೀಲೇಶ್ವರ, ಕಾಞಂಗಾಡು ಪ್ರದೇಶಗಳಲ್ಲಿ ಫಾರ್ಮರ್ಸ್ ಪ್ರೊಡ್ಯೂಸರ್ಸ್ ಕಂಪೆನಿಯನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ. ಪರಪ್ಪದಲ್ಲಿ 10 ಎಕ್ರೆ ಜಾಗದಲ್ಲಿ ಹಣ್ಣು , ತರಕಾರಿ ರಖಂ ಮಾರುಕಟ್ಟೆಯನ್ನು ಆರಂಭಿಸಲಾಗುವುದು. ಜನಸಾಮಾನ್ಯರ ಬದುಕಿಗೆ ಅಗತ್ಯವಿರುವ ಎಲ್ಲ ವಿಚಾರಗಳನ್ನೂ ಕೃಷಿ ವಲಯದ ಮೂಲಕ ಕಂಡುಕೊಳ್ಳುವ ವಿಶಾಲ ದೃಷ್ಟಿಕೋನದೊಂದಿಗೆ ಕೃಷಿ, ಪಶುಸಂಗೋಪನೆ, ಮೀನು ಸಾಕಣೆ, ಹಾಲು ಉತ್ಪಾದನೆ ಇತ್ಯಾದಿ ರಂಗಗಳನ್ನು ಏಕೀಕರಣಗೊಳಿಸಿ ಸುಭಿಕ್ಷ ಕೇರಳಂ ಯೋಜನೆಯನ್ನು ಕಾಸರಗೋಡು ಜಿಲ್ಲೆಯಲ್ಲಿ ಜಾರಿಗೊಳಿಸಲು ನಿರ್ಧರಿಸಲಾಗಿದೆ.
ಜಿಲ್ಲಾಡಳಿತ, ಕೃಷಿಕ ಕಲ್ಯಾಣ – ಕೃಷಿ ಅಭಿವೃದ್ಧಿ ಇಲಾಖೆ, ಸಹಕಾರಿ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಸ್ಥಳೀಯಾಡಳಿತ ಇಲಾಖೆ, ಹರಿತ ಕೇರಳಂ ಮಿಷನ್ ಇವುಗಳ ಜಂಟಿ ವತಿಯಿಂದ ಯೋಜನೆಯು ಜಾರಿಗೊಳಿಸುತ್ತಿವೆ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನ ಸಹಾಯದೊಂದಿಗೆ 1285.86 ಹೆಕ್ಟೇರ್ ಬಂಜರು ಜಾಗವನ್ನು ಸುಭಿಕ್ಷ ಕೇರಳಂ ಯೋಜನೆಯ ಅಂಗವಾಗಿ ಕೃಷಿ ಇಲಾಖೆ ಪತ್ತೆಮಾಡಿ ಅಪ್ಲೋಡ್ ನಡೆಸಿದೆ. ಇದರಲ್ಲಿ 1070.5 ಹೆಕ್ಟೇರ್ ಜಾಗದಲ್ಲಿ ಈಗಾಗಲೇ ಕೃಷಿ ನಡೆಸಲಾಗಿದೆ. 499.33 ಹೆಕ್ಟರ್ ಜಾಗದಲ್ಲಿ ಭತ್ತದ ಕೃಷಿ, 72 ಹೆಕ್ಟೇರ್ ಜಾಗದಲ್ಲಿ ತರಕಾರಿ ಕೃಷಿ ನಡೆಸಲಾಗುತ್ತಿದೆ. 330 ಹೆಕ್ಟೇರ್ ನಲ್ಲಿ ಗೆಡ್ಡೆ ಗೆಣಸು ಕೃಷಿ ನಡೆಯುತ್ತಿದೆ.
ಪಶುಸಂಗೋಪನೆ ಇಲಾಖೆಯ ನೇತೃತ್ವದಲ್ಲಿ ಕುಂಬಳೆಯ ಅಂಬಿಲಡ್ಕದಲ್ಲಿ ಕಾಸರಗೋಡು ಜಿಲ್ಲೆಯ ಗಿಡ್ಡ ತಳಿ ಹಸು ಸಂರಕ್ಷಣೆ ಯೋಜನೆ ಜಾರಿಗೆ ರೂಪುರೇಷೆ ಸಿದ್ಧಪಡಿಸಲಾಗಿದೆ. ನ್ಯಾಷನಲ್ ಕೌ ಸಕ್ರ್ಯೂಟ್ ನಲ್ಲಿ ಅಳವಡಿಸಿ ಈ ಯೋಜನೆಯು ಅನುಷ್ಠಾನಕ್ಕೆ ಬರಲಿದೆ. ಸಿಹಿ ನೀರಿನಲ್ಲಿ ಮೀನು ಸಾಕಣೆ ಕ್ಷೇತ್ರದಲ್ಲೂ ಕಾಸರಗೋಡು ಮುನ್ನಡೆ ಸಾಧಿಸುತ್ತಿದೆ. 9.5 ಹೆಕ್ಟೇರ್ ಜಾಗದ ಜಲಾಶಯಗಳಲ್ಲಿ ಮೀನು ಮರಿಗಳ ಹೂಡಿಕೆ ನಡೆಸಲಾಗಿದೆ. 74 ಕೆರೆಗಳು, 39 ಬಯೋ ಫ್ಲಾಕ್ ಗಳನ್ನೂ ಯೋಜನೆಯ ಅಂಗವಾಗಿ ನಿರ್ಮಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss