Friday, July 1, 2022

Latest Posts

ಸುಮಾರು 5200 ಮಂದಿ ಕೋವಿಡ್ ಪರೀಕ್ಷಾ ವರದಿ ಬಾರದೆಯೇ ಮರಳಿದ್ದಾರೆ ಮನೆಗಳಿಗೆ: ಆತಂಕದಲ್ಲಿ ಉಡುಪಿಯ ಜನತೆ

ಉಡುಪಿ: ಕೋವಿಡ್-19 ಸೋಂಕಿನ ಪ್ರಕರಣಗಳು ಉಡುಪಿ ಜಿಲ್ಲೆಯಲ್ಲಿ ಏರುಗತಿಯಲ್ಲಿದ್ದರೆ, ಇನ್ನೊಂದು ಆಘಾತಕಾರಿ ಸುದ್ದಿ ಜಿಲ್ಲೆಯ ಜನತೆಯನ್ನು ಬೆಚ್ಚಿ ಬೀಳಿಸುತ್ತಿದೆ. ಸುಮಾರು 5200 ಮಂದಿ ಕೋವಿಡ್ ಪರೀಕ್ಷಾ ವರದಿ ಬಾರದೆಯೇ ಮನೆಗಳಿಗೆ ಮರಳಿದ್ದಾರೆ.
ಇನ್ನೂ ಆತಂಕಕಾರಿ ಸಂಗತಿ ಎಂದರೆ ದಿಗ್ಬಂಧನ ಕೇಂದ್ರಗಳಲ್ಲಿ 14 ದಿನಗಳನ್ನು ಪೂರೈಸಿದವರು ಯಾರೂ ಮನೆಗಳಲ್ಲಿಯೇ ಉಳಿಯಬೇಕು ಎನ್ನುವ ನಿಯಮವೂ ಇಲ್ಲ. ಆದ್ದರಿಂದ ಜಿಲ್ಲೆಯ ಯಾವ ಮೂಲೆಯಲ್ಲಾದರೂ ಕೋವಿಡ್ ಸೋಂಕು ಸ್ಪೋಟಗೊಳ್ಳುವ ಸಾಧ್ಯತೆಗಳಿವೆ. ಇದು ಜಿಲ್ಲೆಯ ಜನರನ್ನು ತೀವ್ರ ಅಪಾಯಕ್ಕೆ ದೂಡಿದೆ.
ದಿಗ್ಬಂಧನ ಕೇಂದ್ರದಿಂದ 8000 ಜನ ಮನೆಗೆ
ಕೋವಿಡ್-19 ಸೋಂಕು ಕಂಡುಬಂದ ಪ್ರಾರಂಭದಲ್ಲಿ 14ದಿನಗಳ ದಿಗ್ಬಂಧನ ಅವಧಿಯನ್ನು 28 ದಿನಗಳಿಗೆ ಏರಿಕೆ ಮಾಡಿ ಸರಕಾರ ಆದೇಶಿಸಿತ್ತು. ಕಾರಣ ಸೋಂಕಿನ ರೋಗ ಲಕ್ಷಣಗಳು 14 ದಿನಗಳ ನಂತರವೂ ಕಾಣಿಸತೊಡಗಿತ್ತು. ಇದೀಗ ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ದಿಗ್ಬಂಧನ ಅವಧಿಯನ್ನು ಮತ್ತೆ 14 ದಿನಗಳಿಗೆ ಇಳಿಸಿದೆ. ಅದರಲ್ಲಿ 7ದಿನ ಸಾಂಸ್ಥಿಕ ದಿಗ್ಬಂಧನ, ಉಳಿದ 7ದಿನ ಗೃಹ ದಿಗ್ಬಂಧನವಾಗಿದೆ. ಇದರಿಂದ ಉಡುಪಿ ಜಿಲ್ಲೆಯಲ್ಲಿರುವ ಸುಮಾರು 8000 ಮಂದಿ ಮನೆಗಳಿಗೆ ಮರಳಿದ್ದಾರೆ. ಬುಧವಾರದವರೆಗೆ ಸುಮಾರು 3000 ಜನರನ್ನು ಜಿಲ್ಲಾಡಳಿತ ಸಾಂಸ್ಥಿಕ ದಿಗ್ಬಂಧನ ಕೇಂದ್ರಗಳಿಗೆ ಮನೆಗೆ ಕಳುಹಿಸಿದರೆ, ಗುರುವಾರ ಒಂದೇ ದಿನ 5000 ಜನ ತಮ್ಮ ಮನೆಗಳಿಗೆ ಮರಳಿದ್ದಾರೆ.
ಪರೀಕ್ಷೆಗೊಳಪಟ್ಟ ಶೇ. 5 ಜನರಲ್ಲಿ ಸೋಂಕು
ಜಿಲ್ಲೆಯಲ್ಲಿ 2ನೇ ಹಂತದಲ್ಲಿ ಕೋವಿಡ್ ಸೋಂಕು ಕಾಣಿಸಿಕೊಳ್ಳಲು ಪ್ರಾರಂಭವಾದ ಅಂದರೆ ಮೇ 15ರ ಬಳಿಕ ಒಟ್ಟು 8617 ಜನರ ಗಂಟಲ ದ್ರವ ಮಾದರಿಗಳನ್ನು ಕೋವಿಡ್ ಪರೀಕ್ಷೆಗಾಗಿ ಪಡೆಯಲಾಗಿದೆ. ಇದರಲ್ಲಿ ಪರೀಕ್ಷೆಗೆ ಒಳಪಟ್ಟಿರುವುದು 3,283 ಮಾದರಿಗಳು ಮಾತ್ರ. ಇನ್ನೂ 5334 ಮಾದರಿಗಳ ಪರೀಕ್ಷೆ ನಡೆಯಲು ಬಾಕಿ ಇದೆ. ಮೇ 15ರ ಬಳಿಕ ಜಿಲ್ಲೆಯಲ್ಲಿ ಪತ್ತೆಯಾದ ಪ್ರಕರಣಗಳು ಬರೋಬ್ಬರಿ 146. ಅಂದರೆ ಪರೀಕ್ಷೆಗೊಳಪಟ್ಟ ಶೇ. 5ಜನರಲ್ಲಿ ಸೋಂಕು ಪತ್ತೆಯಾಗಿದೆ.
ಮಹಾರಾಷ್ಟ್ರದಿಂದ ಬಂದವರಲ್ಲಿಯೇ ಅಧಿಕ
ಉಡುಪಿ ಜಿಲ್ಲೆಗೆ ಕಳೆದ 20-22 ದಿನಗಳಲ್ಲಿ 8168 ಮಂದಿ ಹೊರ ರಾಜ್ಯಗಳಿಂದ ಆಗಮಿಸಿದ್ದಾರೆ. ಈ ಪೈಕಿ 7226 ಮಂದಿ ಮಹಾರಾಷ್ಟ್ರದಿಂದ ಬಂದವರು. ಗಂಟಲ ದ್ರವ ಮಾದರಿ ಪಡೆದವರಲ್ಲಿ ಶೇ. 85ರಷ್ಟು ಜನ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಈಗಾಗಲೇ ಮಹಾರಾಷ್ಟ್ರದಿಂದ ಬಂದ 124 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಸುಮಾರು 2500 ಮಂದಿ ಮಹಾರಾಷ್ಟ್ರದಿಂದ ಬಂದವರ ಕೋವಿಡ್ ಪರೀಕ್ಷೆ ನಡೆದರೂ ಶೇ. 5-6ರಷ್ಟು ಜನರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಈ ಲೆಕ್ಕಾಚಾರದಂತೆ ಪರೀಕ್ಷೆ ನಡೆಯಲು ಬಾಕಿ ಇರುವ ಸುಮಾರು 280-300 ಜನರಲ್ಲಿ ಸೋಂಕು ಇರುವ ಸಾಧ್ಯತೆ ಇದೆ. ಪ್ರಸ್ತುತ ಇವರೆಲ್ಲರೂ ಮನೆಗಳಿಗೆ ತೆರಳಿದ್ದಾರೆ.
ಸುಮಾರು 5200ಮಾದರಿಗಳ ಪರೀಕ್ಷೆಯೇ ಇಲ್ಲ
ಸರಕಾರದ ಪರಿಷ್ಕೃತ ನಿಯಮಾವಳಿಗಳ ಪ್ರಕಾರ ರೋಗ ಲಕ್ಷಣಗಳು ಇದ್ದರೆ ಮಾತ್ರ ಗಂಟಲ ದ್ರವ ಮಾದರಿಯ ಪರೀಕ್ಷೆ ನಡೆಸಬೇಕು. ಯಾವುದೇ ರೋಗ ಲಕ್ಷಣಗಳಿಲ್ಲದಿದ್ದರೆ ಪರೀಕ್ಷೆ ನಡೆಸುವಂತಿಲ್ಲ. ಹೊರ ರಾಜ್ಯದಿಂದ ಬಂದು 7ದಿನಗಳಾದರೆ ಮನೆಗೆ ಕಳುಹಿಸಬೇಕು. ಈ ಅವಧಿಯಲ್ಲಿ ಪರೀಕ್ಷಾ ವರದಿ ಬಾರದಿದ್ದರೆ ಮತ್ತೆ ಆ ಮಾದರಿಯ ಪರೀಕ್ಷೆ ರದ್ದು ಮಾಡಬೇಕು. ಅದರಂತೆ ಇದೀಗ ಪರೀಕ್ಷೆಗೆ ಬಾರಿ ಇರುವ 5334 ಮಾದರಿಗಳಲ್ಲಿ ಸುಮಾರು 5200ಮಾದರಿಗಳನ್ನು ರದ್ದು ಪಡಿಸುವ ಸಾಧ್ಯತೆ ಇದೆ. ರೋಗ ಲಕ್ಷಣಗಳಿಲ್ಲ ಎನ್ನುವ ಕಾರಣ ಒಂದೆಡೆಯಾದರೆ, 7ದಿನಗಳಾಗಿರುವುದರಿಂದ ಪರೀಕ್ಷೆಗೊಳಪಡುವ ಅರ್ಹತೆ ಕಳೆದುಕೊಳ್ಳಲಿವೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ರೋಗ ಲಕ್ಷಣಗಳಿದ್ದರೆ ಮಾತ್ರ ಪರೀಕ್ಷೆ
ಸರಕಾರದ ನಿಮಯ ಪ್ರಕಾರ ಇನ್ನು ಮುಂದೆ ರೋಗ ಲಕ್ಷಣಗಳಿದ್ದರೆ ಮಾತ್ರ ಅಂತಹವರ ಪರೀಕ್ಷೆ ನಡೆಸಲಾಗುತ್ತದೆ. ಆದ್ದರಿಂದ ಶೀತ, ಕೆಮ್ಮು, ಜ್ವರ ಬಾಧೆ ಇರುವವರು ಫೀವರ್ ಕ್ಲಿನಿಕ್‌ಗಳಿಗೆ ತೆರಳಿ ತಪಾಸಣೆಗೊಳಗಾಗಬೇಕು. ಅದೇ ರೀತಿ ವಿವಿಧ ಆಸ್ಪತ್ರೆಗಳಿಂದ ತೀವ್ರ ಉಸಿರಾಟದ ತೊಂದರೆ ಇರುವ ರೋಗಿಗಳು ಶಿಫಾರಸುಗೊಂಡರೆ ಅವರ ಪರೀಕ್ಷೆ ನಡೆಸಲಾಗುತ್ತದೆ ಎಂದು ಡಿಎಚ್‌ಒ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss