ಮಂಡ್ಯ : ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳ ಮೇಲೆ ರಾಜ್ಯ ಸರ್ಕಾರ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಷ್ಟ್ರ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಸಮಿತಿಯ ಗೌರವಾಧ್ಯಕ್ಷ ಸಿ.ಎಸ್. ವೆಂಕಟೇಶ್ ಮಾತನಾಡಿ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾ ರಂಗಕ್ಕೆ ನಮ್ನನ್ನು ಆಳುವವರ ತಪ್ಪುಗಳ ಬಗ್ಗೆ ಎಚ್ಚರಿಸುವ ಸ್ವಾತಂತ್ರ್ಯವನ್ನು ಸಂವಿಧಾನ ನೀಡಿದೆ. ಆದರೆ, ಕರ್ನಾಟಕ ಸರ್ಕಾರ ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳ ಮೇಲೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದ್ದು, ಇದು ಪ್ರಜಾತಂತ್ರ ವ್ಯವಸ್ಥೆಯು ಅವಸಾನದ ಅಂಚಿನತ್ತ ಹೋಗುತ್ತಿರುವುದಕ್ಕೆ ಉದಾಹರಣೆಯಾಗಿದೆ ಎಂದು ಹೇಳಿದರು.
ಸುಗ್ರೀವಾಜ್ಞೆ ಮೂಲಕ ಭೂಸುಧಾರಣೆ ಹಾಗೂ ಎಪಿಎಂಸಿ ಕಾಯಿದೆಗಳನ್ನು ಜಾರಿಗೆ ತಂದು ರೈತರ ಬೆನ್ನೆಲುಬನ್ನು ಮುರಿದಿದೆ. ಎಲ್ಲಾ ಇಲಾಖೆಗಳ ಕೆಲ ಅಧಿಕಾರಿ ವರ್ಗ ಭ್ರಷ್ಟಾಚಾರದಲ್ಲಿ ತೊಡಗಿ ಜನಸಾಮಾನ್ಯರ ಕೆಲಸಗಳನ್ನು ಮಾಡಿಕೊಡುವಲ್ಲಿ ವಿಫಲರಾಗಿದ್ದಾರೆ. ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಂಡು ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.