Sunday, June 26, 2022

Latest Posts

ಸುಸೂತ್ರವಾಗಿ ನಡೆದ ಚಿಕ್ಕಮಗಳೂರು ಜಿಲ್ಲೆಯ ಗ್ರಾ.ಪಂ. ಚುನಾವಣೆಯ ಮತ ಎಣಿಕಾ ಕಾರ್ಯ

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಜಿಲ್ಲೆಯ 194 ಗ್ರಾಮ ಪಂಚಾಯ್ತಿಯ 1893 ಸ್ಥಾನಗಳಿಗೆ ಡಿ.22ರಂದು ನಡೆದಿದ್ದ ಚುನಾವಣೆಯ ಮತ ಎಣಿಕೆ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಬುಧವಾರ ಸುಸೂತ್ರವಾಗಿ ನಡೆದಿದೆ.
ಒಟ್ಟು 5290 ಅಭ್ಯರ್ಥಿಗಳ ಹಣೆ ಬರಹವನ್ನು ಎಣಿಕೆ ಸಿಬ್ಬಂದಿ ಬಹಿರಂಗಗೊಳಿಸಿದರು. ಮತದಾರರ ಆಶೀರ್ವಾದ ಇದ್ದವರು ಗೆದ್ದು ಬೀಗಿದರೆ, ಸೋತವರು ಅದೃಷ್ಟವನ್ನೂ, ಮತ ಹಾಕದವರನ್ನು ಹಳಿಯುತ್ತ ಮೆನೆಯ ಕಡೆ ಹೆಜ್ಜೆ ಹಾಕಿದರು.
ರಾಜಕೀಯ ಪಕ್ಷಗಳ ಚಿನ್ಹೆ ಇಲ್ಲದೆ ನಡೆದ ಚುನಾವಣೆಯಾದರೂ ಪರೋಕ್ಷವಾಗಿ ಬೆಂಬಲಿಸಿದ್ದ ವಿವಿಧ ಪಕ್ಷದ ಮುಖಂಡರುಗಳು ಮತ ಎಣಿಕೆ ಕೇಂದ್ರಗಳಲ್ಲಿ ಹಾಜರಿದ್ದು ವಿಜೇತರನ್ನು ಅಭಿನಂದಿಸಿ, ಹೆಗಲ ಮೇಲೆ ಹೊತ್ತು ಮೆರವಣಿಗೆಯನ್ನೂ ಮಾಡಿದರು.
ಯಾವ ಪಕ್ಷದವರೊಂದಿಗೂ ಗುರುತಿಸಿಕೊಳ್ಳದೆ ಪಕ್ಷೇತರಾಗಿ ನಿಂತು ಗೆದ್ದವರನ್ನು ಮತ ಎಣಿಕೆ ಕೇಂದ್ರದಲ್ಲೇ ತಮ್ಮತ್ತ ಸೆಳೆದುಕೊಂಡು ಪಂಚಾಯ್ತಿ ಅಧಿಕಾರವನ್ನು ಸುಗಮವಾಗಿ ಹಿಡಿಯಲು ಪ್ರಮುಖ ಪಕ್ಷಗಳು ಕಸರತ್ತು ನಡೆಸಿದ್ದು ಕಂಡು ಬಂತು.
ಪಕ್ಷದ ಕಾರ್ಯಕರ್ತರಾಗಿ ಕೆಲಸ ಮಾಡಿ ಚುನಾವಣೆ ಗೆದ್ದವರು ಅಂಜಿಕೆ ಇಲ್ಲದೆ ತಾವು ಇಂತಹದ್ದೇ ಪಕ್ಷದ ಬೆಂಬಲಿಗರು ಎಂದು ಹೇಳಿಕೊಂಡರೆ ಪಕ್ಷೇತರರಾಗಿ ಗೆದ್ದ ಕೆಲವರು ಈಗಲೇ ಏನನ್ನೂ ಹೇಳುವುದಿಲ್ಲ ಎಂದು ಹೇಳಿ ನುಣುಚಿಕೊಂಡರು.
ಬೆಳಗಾಗುತ್ತಲೇ ದೇವರ ದರ್ಶನ ಮಾಡಿ ಗೆಲುವಿಗೆ ಹರಕೆ ಹೊತ್ತ ಅಭ್ಯರ್ಥಿಗಳು ನೇರವಾಗಿ ಮತ ಎಣಿಕೆ ಕೇಂದ್ರಕ್ಕೆ ಬಂದಿದ್ದರು. ಬಹುತೇಕ ಎಲ್ಲ ಅಭ್ಯರ್ಥಿಗಳು ಪರಸ್ಪರ ಪರಿಚಯಸ್ತರು, ಸ್ನೇಹಿತರು, ಸಂಬಂಧಿಗಳೇ ಆಗಿದ್ದರು. ಪ್ರತಿ ಮತ ಪತ್ರವನ್ನು ತೆರೆಯುವಾಗಲೂ ಅಭ್ಯರ್ಥಿಗಳ ಎದೆಬಡಿತ ಹೆಚ್ಚುತ್ತಿತ್ತು. ಹೆಚ್ಚಿನ ಅಂತರದಲ್ಲಿ ಹಿಂದೆ ಉಳಿದವರು ಸೋಲು ಖಚಿತ ಎನಿಸುತ್ತಿದ್ದಂತೆ ಮತ ಎಣಿಕೆ ಪೂರ್ಣಗೊಳ್ಳುವ ಮುನ್ನವೇ ಜಾಗ ಖಾಲಿ ಮಾಡಿದರು. ತೀವ್ರ ಪೈಪೋಟಿ ಎದುರಿಸಿದವರು ಕೊನೆ ಕ್ಷಣದ ವರಗೆ ತುದಿಗಾಲಿನಲ್ಲಿ ನಿಂತು ಫಲಿತಾಂಶಕ್ಕಾಗಿ ಕಾದಿದ್ದರು.
ತುರುಸಿನ ಪೈಪೋಟಿ ನೀಡಿದ್ದ ಅಭ್ಯರ್ಥಿಗಳು ಮತಗಟ್ಟೆಯಲ್ಲಿ ಕಡ್ಡಾಯವಾಗಿ ಹಾಜರಿದ್ದರೆ, ಸೋಲಿನ ಸುಳಿವರಿತ ಬಹುತೇಕ ಅಭ್ಯರ್ಥಿಗಳು ಮನೆಯಲ್ಲೇ ಉಳಿದರು.
ಅಜ್ಜಂಪುರ ತಾಲ್ಲೂಕಿಗೆ ಸಂಬಂಧಿಸಿದ 24, ಚಿಕ್ಕಮಗಳೂರು 41, ಕಡೂರು 49, ಕೊಪ್ಪ 21, ಮೂಡಿಗೆರೆ 26, ನ.ರಾ.ಪುರ, ಶೃಂಗೇರಿ9 ಹಾಗೂ ತರೀಕೆರೆ ತಾಲ್ಲೂಕಿನ 25 ಪಂಚಾಯ್ತಿಗಳ 1893 ಸ್ಥಾನಗಳಿಗೆ 5290 ಅಭ್ಯರ್ಥಿಗಳು ಗಳಿಸಿದ ಮತಗಳನ್ನು ಎಣಿಸಲಾಯಿತು.
ಚಿಕ್ಕಮಗಳೂರು ನಗರದ ಎಸ್‍ಟಿಜೆ ಕಾಲೇಜು, ಮೂಡಿಗೆರೆಯ ಸರ್ಕಾರಿ ಪಿಯು ಕಾಲೇಜು, ಶೃಂಗೇರಿಯ ಜೆಸಿಬಿಎಂ ಕಾಲೇಜು, ಕೊಪ್ಪದ ಬಾಳಗಡಿಯ ಸರ್ಕಾರಿ ಪ್ರಥಮದರ್ಜೆಕಾಲೇಜು, ತರೀಕೆರೆಯ ಎಸ್‍ಜೆಎಂ ಪ್ರಥಮದರ್ಜೆಕಾಲೇಜು, ಕಡೂರು ಸರ್ಕಾರಿ ಪದವಿಪೂರ್ವ ಕಾಲೇಜು, ನರಸಿಂಹರಾಜಪುರದ ಮೆಣಸೂರು ಸರ್ಕಾರಿ ಪ್ರಥಮದರ್ಜೆ ಕಾಲೇಜು, ಅಜ್ಜಂಪುರ ಪಟ್ಟಣದ ಕನ್ನಡ ವಿದ್ಯಾಸಂಸ್ಥೆಯಲ್ಲಿ ಮತಎಣಿಕೆ ನಡೆಯಿತು.
545 ಸಿಬ್ಬಂದಿ
ಜಿಲ್ಲೆಯ 8 ತಾಲ್ಲೂಕುಗಳಲ್ಲಿ ಮತ ಎಣಿಕೆಗೆ 246 ಟೇಬಲ್‍ಗಳನ್ನು ಜೋಡಿಸಲಾಗಿದೆ. 246 ಎಣಿಕೆ ಮೇಲ್ವಿಚಾರಕರು, 26 ಮಂದಿ ಕಾಯ್ದಿರಿಸಿದ ಸಿಬ್ಬಂದಿ ಸೇರಿದಮತೆ ಒಟ್ಟು 272 ಮಂದಿ ಹಾಗೂ ಎಣಿಕೆ ಸಹಾಯಕರು 492 ಜನರು ಕಾಯ್ದಿರಿಸಿದ 53 ಮಂದಿ ಸೇರಿದಂತೆ ಒಟ್ಟು 546 ಮೇಲ್ವಿಚಾರಕರು ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಎಲ್ಲ ಮತ ಎಣಿಕೆ ಕೇಂದ್ರಗಳ ಮುಂದೆ ಅಭ್ಯರ್ಥಿಗಳ ಬೆಂಬಲಿಗರು, ಸಂಬಂಧಿಕರ ದೊಡ್ಡ ದಂಡೇ ಸೇರಿತ್ತು. ಅಭ್ಯರ್ಥಿಗಳು ಗೆದ್ದ ವಿಚಾರ ಗೊತ್ತಾಗುತ್ತಿದ್ದಂತೆ ಜೈಕಾರ, ಸಿಳ್ಳೇ ಹಾಕಿ ಸಂಭ್ರಮಿಸಿದರು.
ಮತೆಣಿಕೆ ಕೇಂದ್ರಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅಭ್ಯರ್ಥಿಗಳನ್ನಲ್ಲದೆ ಬಾರೆಯಾರನ್ನೂ ಒಳಕ್ಕೆ ಬಿಡುವ ವ್ಯವಸ್ಥೆ ಇರಲಿಲ್ಲ. ಈ ಕಾರಣಕ್ಕೆ ಆಗಾಗ ಪೊಲೀಸರೊಂದಿಗೆ ವಾಗ್ವಾದಗಳು ನಡೆದವು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss