ಹೊಸದಿಗಂತ ಆನ್ ಲೈನ್ ಡೆಸ್ಕ್:
ಬ್ರಿಟನ್ ನಲ್ಲಿ ಕೊರೋನಾ ರೂಪಾಂತರ ನಡುವೆ ಅಲ್ಲಿಂದ ಕರ್ನಾಟಕಕ್ಕೆ ಆಗಮಿಸಿದವರಲ್ಲಿ ಇದೀಗ ಸೋಂಕು ದೃಢಪಟ್ಟಿದ್ದು, ಈ ಹಿನ್ನೆಲೆ ರಾಜ್ಯದಲ್ಲಿ ಆತಂಕ ಮನೆ ಮಾಡಿದೆ. ಇದರ ಜೊತೆಗೆ ಇತ್ತ ರಾಜ್ಯದಲ್ಲಿ ಜನವರಿ ಒಂದರಿಂದ ಶಾಲೆ ಪ್ರಾರಂಭಿಸಬೇಕೆ, ಬೇಡವೇ ಎಂಬ ವಿಚಾರ ಕುರಿತು ಗೊಂದಲವಿದೆ.
ಈ ಕುರಿತು ಮಾಹಿತಿ ನೀಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ , ಕೊರೋನಾ ವೈರಾಣು ಹೊಸ ರೂಪಾಂತರ ಪಡೆದಿರುವ ಹಿನ್ನೆಲೆಯಲ್ಲಿ ಶಾಲೆ ಪ್ರಾರಂಭಿಸಬೇಕೆ, ಬೇಡವೇ ಎಂಬ ತಾಂತ್ರಿಕ ಸಲಹಾ ಸಮಿತಿ ವರದಿಯನ್ನುವರದಿ ಕೇಳಿದ್ದು, ವರದಿ ಬಂದ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚೆ ಮಾಡಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಸದ್ಯಕ್ಕೆ ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಮಾಡುವ ಬಗ್ಗೆ ಚಿಂತನೆ ನಡೆಸಿಲ್ಲ. ಆದರೆ, ರಾತ್ರಿ ಕಫ್ರ್ಯೂ ಜಾರಿಗೊಳಿಸುವ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ನಿನ್ನೆ ರಾತ್ರಿ ಕೇಂದ್ರ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಯೊಂದಿಗೆ ಮಾತನಾಡಿದ್ದು, ಆ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನೈಟ್ ಕಫ್ರ್ಯೂ ವಿಧಿಸಬಹುದೆಂಬ ಸಲಹೆ ಮಾಡಿದ್ದಾರೆ. ಈಗಾಗಲೇ ಕೆಲವು ರಾಜ್ಯಗಳು ಜಾರಿ ಮಾಡಿದ್ದು, ನಮ್ಮ ರಾಜ್ಯದಲ್ಲೂ ಮುಖ್ಯಮಂತ್ರಿಯವರೊಂದಿಗೆ ಸಮಾಲೋಚನೆ ನಡೆಸಿ ತೀರ್ಮಾನ ತೆಗೆದುಕೊಳ್ಳಬಹುದು ಎಂಬ ಸಲಹೆ ನೀಡಿದ್ದಾರೆ ಎಂದರು.