ಹೊಸ ದಿಗಂತ ವರದಿ, ಕೋಲಾರ:
ನೈಟ್ ಕರ್ಫ್ಯೂ ಸಂದರ್ಭ ಯಾವುದೇ ಮದ್ಯದಂಗಡಿಗಳು ತೆರೆಯುವಂತಿಲ್ಲ, ಉಲ್ಲಂಘಿಸಿದಲ್ಲಿ ಮುಲಾಜಿಲ್ಲದೆ ಪರವಾನಗಿ ರದ್ದುಪಡಿಸುವುದಾಗಿ ರಾಜ್ಯ ಅಬಕಾರಿ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಎಚ್ಚರಿಕೆ ನೀಡಿದರು.
ನಗರ ಹೊರವಲಯದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕೊರೊನಾ ಮೊದಲ ಹಂತದಲ್ಲಿ ರಾತ್ರಿ 8 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೂ ಕರ್ಫ್ಯೂ ಇತ್ತು. ಅದನ್ನು ಈಗ ರಾತ್ರಿ 11ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೂ ಮಾಡಲು ನಿರ್ಧರಿಸಲಾಗಿದ್ದು, ಅದರಲ್ಲಿ ನಮ್ಮ ಅಬಕಾರಿ ಇಲಾಖೆ ಪಾಲು ಜಾಸ್ತಿ ಇದೆ ಎಂದರು.
ನಾವು ಸಡಿಲ ಬಿಟ್ಟರೆ ಕೊರೊನಾ ಎಫೆಕ್ಟ್ ಜಾಸ್ತಿಯಾಗಬಹುದು ಅದಕ್ಕೆ ಈಗಾಗಲೇ ಅಬಕಾರಿ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದು,11ಗಂಟೆಯ ಬಳಿಯ ಯಾವುದೇ ಬಾರ್, ವೈನ್ಶಾಪ್, ಲಿಕ್ಕರ್ಶಾಪ್, ಪಬ್ ಮುಂತಾದವುಗಳು ನಡೆಯಬಾರದು.
ಒಂದು ವೇಳೆ ಯಾರಾದರೂ ಉಲ್ಲಂಘಿಸಿ ಅವುಗಳನ್ನು ತೆರೆದಿದ್ದೇ ಆದಲ್ಲಿ ನಿರ್ಧಾಕ್ಷಿಣ್ಯವಾಗಿ ಪರವಾನಗಿ ರದ್ದುಪಡಿಸಲು ಕಟ್ಟುನಿಟ್ಟಿನ
ಕ್ರಮಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ತೆರೆಯುವುದಕ್ಕೆ ಅವಕಾಶ ನೀಡಬಾರದೆಂದು ಮೇಲ್ ಮೂಲಕ ಸೂಚಿಸಲಾಗಿದೆ.
ಈಗ ಜಾರಿಗೆ ತರಲಾಗಿರುವ ರಾತ್ರಿ ಕರ್ಫ್ಯೂ ಸ್ವಾಗತಾರ್ಹವಾಗಿದ್ದು, ಎಲ್ಲ ನಿರೀಕ್ಷೆಗಳಂತೆ ಒಳ್ಳೆಯ ನಿರ್ಧಾರವಾಗಿದೆ. ಕ್ರಿಸ್ಮಸ್, ಹೊಸ ವರ್ಷ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಗಳು ಹೆಚ್ಚಾಗಿ ನಡೆಯುವ ಸಾಧ್ಯತೆಗಳು ಇವೆ. ಕರ್ಫ್ಯೂ ಇದ್ದರೆ ಅವೆಲ್ಲವನ್ನೂ ನಿಯಂತ್ರಣ ಮಾಡಲು ಸಾಧ್ಯವಾಗುತ್ತದೆ. ಕೊರೊನಾ 2ನೇ ಅಲೆ ಬ್ರಿಟನ್ನಿಂದ ಬಂದಿರುವುದರಿಂದಾಗಿ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದ್ದು, ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ಮುಂದುವರೆಸಲಾಗುವುದು
ಇಲ್ಲವಾದಲ್ಲಿ ತೆಗೆದುಹಾಕಲಾಗುವುದು ಈ ಬಗ್ಗೆಯೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದ ಅವರು, ಒಟ್ಟಾರೆ ಕರ್ಫ್ಯೂದಿಂದಾಗಿ ಕೊರೊನಾ ಬಗ್ಗೆ ಜನರಲ್ಲಿಯೂ ಹೆಚ್ಚಿನ ಜಾಗೃತಿ ಬರಲು ಸಹಕಾರಿಯಾಗುವುದು ಎಂದು ತಿಳಿಸಿದರು.