ಹೊಸದಿಗಂತ ಆನ್ ಲೈನ್ ಡೆಸ್ಕ್:
ಬ್ರಿಟನ್ನಿಂದ ಕಂಡು ಬಂದ ನೂತನ ಕೊರೋನಾ ರೂಪಾಂತರದ ಪರಿಣಾಮ, ವಿಶ್ವವೇ ತಲ್ಲಣವಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ.
ಈ ಕುರಿತು ಮಾಹಿತಿ ನೀಡಿದ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ , ಬ್ರಿಟನ್ನಿಂದ ದೆಹಲಿಗೆ ಬಂದಿರುವವರನ್ನು ಪತ್ತೆ ಮಾಡಿ, ಕಡ್ಡಾಯವಾಗಿ ಕೊರೋನಾ ಸೋಂಕು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಬ್ರಿಟನ್ ಮತ್ತು ಭಾರತದ ನಡುವಿನ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿರುವ ಕೇಂದ್ರದ ಕ್ರಮ ಮೆಚ್ಚುವಂತದ್ದು. ಇದರಿಂದ ದೇಶದಲ್ಲಿ ಹೊಸ ರೂಪದ ಕೊರೋನಾ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬರಬಹುದು ಎಂದು ಜೈನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಮನೆ-ಮನೆಗೆ ತೆರಳಿ, ಬ್ರಿಟನ್ನಿಂದ ಬಂದಿರುವವರನ್ನು ಪತ್ತೆ ಹಚ್ಚಲಾಗುತ್ತಿದೆ. ಅವರನ್ನು ಪರೀಕ್ಷೆಗೂ ಒಳಪಡಿಸಲಾಗುತ್ತಿದೆ. ಇದಕ್ಕಾಗಿಯೇ ತಂಡವೊಂದನ್ನು ರಚಿಸಲಾಗಿದೆ . ಜನರು ಆತಂಕಕ್ಕೆ ಒಳಗಾಗದೇ, ಸೋಂಕು ಹರಡುವಿಕೆ ತಡೆಯಲು ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ಸಲಹೆ ನೀಡಿದ್ದಾರೆ.