ಹೊಸದಿಗಂತ ಆನ್ ಲೈನ್ ಡೆಸ್ಕ್:
ಸೂಪರ್ ಸ್ಪೀಡ್ ಕೊರೋನಾ ಹರಡುವ ಆತಂಕದಲ್ಲಿ ಯುಕೆಯಿಂದ ಭಾರತಕ್ಕೆ ಬರಬೇಕಿದ್ದ ವಂದೇ ಭಾರತ್ ಮಿಷನ್ ನ ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಈ ಬಗ್ಗೆ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್ ಅವರು, ವಂದೇ ಭಾರತ್ ಮಿಷನ್ ನ 8ನೇ ಫೇಸ್ ನಲ್ಲಿ ಈಗಾಗಲೇ 27 ರಾಷ್ಟ್ರಗಳಿಂದ 40 ಲಕ್ಷ ಜನರಿಗೆ ಅನುಕೂಲ ಮಾಡಿಕೊಡಲಾಗಿದ್ದು, 1005 ವಿಮಾನಗಳು ಕಾರ್ಯಾಚರಣೆ ನಡೆಸುತ್ತಿದೆ.
ಆದರೆ ರೂಪಾಂತರಿ ಕೊರೋನಾ ವೈರಸ್ ನ ವ್ಯಾಪಕತೆಯನ್ನು ಅರಿತು ಯುಕೆ ಯಿಂದ ಭಾರತಕ್ಕೆ ಬರುವ ಅಥವಾ ಭಾರತದಿಂದ ಯುಕೆಗೆ ಹೋಗುವ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದರು.
ಲಾಕ್ ಡೌನ್ ವೇಳೆ ಮೇ ತಿಂಗಳಲ್ಲಿ ಭಾರತ ವಂದೇ ಭಾರತ್ ಮಿಷನ್ ಪ್ರಾರಂಭಿಸಿತು. ಈ ಯೋಜನೆ ಅಡಿಯಲ್ಲಿ ಜಗತ್ತಿನಾದ್ಯಂತ ಸಿಲುಕಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರಲು ಕಾರ್ಯಾಚರಣೆ ನಡೆಸುತ್ತಿದೆ. ಆದರೆ ಕೆಲವು ದಿನಗಳ ಹಿಂದೆಯಷ್ಟೆ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಕೊರೋನಾ ಸೂಪರ್ ಸ್ಪೀಡ್ ಆಗಿ ಹೊಸ ರೂಪಾಂತರವಾಗಿದೆ ಎಂದು ತಿಳಿಸಿದ್ದರು. ಈ ಹಿನ್ನೆಲೆ ಯುಕೆಗೆ ಹೋಗುವ ಹಾಗೂ ಬರುವ ವಿಮಾನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ.