Wednesday, August 17, 2022

Latest Posts

ಸೆಪ್ಟೆಂಬರ್ 19 ರಂದು ರಾಜ್ಯಾದ್ಯಂತ ಮೇಗಾ ಇ-ಲೋಕ್ ಅದಾಲತ್, ನೊಂದವರಿಗೆ ನ್ಯಾಯ ದೊರಕಿಸುವುದೇ ಪ್ರಾಧಿಕಾರದ ಮುಖ್ಯ ಗುರಿ: ನ್ಯಾ. ಅರವಿಂದ ಕುಮಾರ

ಕಲಬುರಗಿ: ಕೋವಿಡ್-19 ಹಿನ್ನೆಲೆಯಲ್ಲಿ ಆರೋಗ್ಯ ದೃಷ್ಠಿಯಿಂದ ಜನಸಂದಣಿ ಇಲ್ಲದೆ ರಾಜಿ ಸಂಧಾನದ ಮೂಲಕ ನ್ಯಾಯ ಒದಗಿಸಿಕೊಡಲು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಸೆಪ್ಟೆಂಬರ್ 19 ರಂದು ರಾಜ್ಯಾದ್ಯಂತ ಮೆಗಾ ಇ-ಲೋಕ್ ಅದಾಲತ್ ನಡೆಸಲಾಗುತ್ತಿದೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಧೀಶರು ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ನ್ಯಾಯಮೂರ್ತಿ ಅರವಿಂದ ಕುಮಾರ ಹೇಳಿದರು.
ಶುಕ್ರವಾರ ಬೆಂಗಳೂರಿನ ಕರ್ನಾಟಕ ಉಚ್ಛ ನ್ಯಾಯಾಲಯದಿಂದ ವೀಡಿಯೋ ಸಂವಾದ ಮೂಲಕ 30 ಜಿಲ್ಲೆಗಳ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರನ್ನು, ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳನ್ನು ಮತ್ತು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಜಾತಿ, ಧರ್ಮವೆಂಬ ತಾರತಮ್ಯವಿಲ್ಲದೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತಾಗಲಿ ಎಂಬುವುದೇ ಪ್ರಾಧಿಕಾರದ ಮುಖ್ಯ ಧ್ಯೇಯ ಮತ್ತು ಲೋಕ್ ಅದಾಲತ್‍ನ ಅಶಯವಾಗಿದೆ. ಕೊರೋನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಕಕ್ಷಿದಾರರು ನ್ಯಾಯಾಲಯಕ್ಕೆ ಬಂದು ಜನಸಂದಣಿ ನಡುವೆ ಕಲಾಪ ನಡೆಸುವುದು ಕಷ್ಠಸಾಧ್ಯ. ಈ ಹಿನ್ನೆಲೆಯಲ್ಲಿ ರಾಷ್ಟ್ರದಲ್ಲಿಯೆ ಮೊದಲ ಬಾರಿಗೆ ರಾಜ್ಯದಲ್ಲಿ ಮೆಗಾ ಇ-ಲೋಕ್ ಅದಾಲತ್ ನಡೆಸಲಾಗುತ್ತದೆ ಎಂದರು.
ಮೆಗಾ ಇ-ಲೋಕ್ ಅದಾಲತ್‍ನಲ್ಲಿ ಕಕ್ಷಿದಾರರು, ವಿಮಾ ಕಂಪನಿಗಳು ಸೇರಿದಂತೆ ಇನ್ನೀತರ ಪ್ರತಿವಾದಿಗಳ ಪ್ರತಿನಿಧಿಗಳು ಹಾಗೂ ವಕೀಲರು ನ್ಯಾಯಾಲಯಕ್ಕೆ ಬರುವ ಅವಶ್ಯಕತೆಯಿಲ್ಲ. ಇವರೆಲ್ಲರು ತಮ್ಮ ಸ್ಥಳದಿಂದಲೇ ಲ್ಯಾಪ್‍ಟಾಪ್ ಅಥವಾ ಸ್ಮಾರ್ಟ್ ಫೋನ್ ಮೂಲಕ ಲೋಕ್ ಅದಾಲತ್‍ನಲ್ಲಿ ದಾಖಲಾತಿಗಳೊಂದಿಗೆ ಭಾಗವಹಿಸಬಹುದಾಗಿದೆ ಎಂದರು.
ಈಗಾಗಲೆ ಬೆಳಗಾವಿಯಲ್ಲಿ ಇದೇ ರೀತಿಯ ಇ-ಲೋಕ್ ಅದಾಲತ್ ಪ್ರಾಯೋಗಿಕವಾಗಿ ನಡೆಸಿ ಯಶ ಕಾಣಲಾಗಿದೆ. ಪ್ರಸ್ತುತ ಕೊರೋನಾ ಆರೋಗ್ಯ ತುರ್ತು ಸಂದರ್ಭದಲ್ಲಿ ಮೋಟಾರ್ ಅಪಘಾತ ಪ್ರಕರಣ, ವಿಮೆ ಪ್ರಕರಣ, ಹಣಕಾಸಿನ ವ್ಯಾಜ್ಯಗಳು, ಕೌಟುಂಬಿಕ, ಸಣ್ಣ-ಪುಟ್ಟ ಸಿವಿಲ್ ವ್ಯಾಜ್ಯಗಳನ್ನು ಈ ಅದಾಲತ್‍ನಲ್ಲಿ ತೆಗೆದುಕೊಂಡು ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ಬಾರ್ ಕೌನ್ಸಿಲ್ ಮತ್ತು ವಿಮೆ ಕಂಪನಿಗಳ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಹಕಾರ ಪಡೆಯಲಾಗಿದೆ ಎಂದರು.
ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಮತ್ತು ಉಚ್ಚ ನ್ಯಾಯಾಲಯದ ಕಾನೂನು ಸೇವೆಗಳ ಪ್ರಾಧಿಕಾರ ಸಮಿತಿಯ ಅಧ್ಯಕ್ಷರಾದ ನ್ಯಾಯಮೂರ್ತಿ ಅಲೋಕ್ ಅರಾಧೆ ಮಾತನಾಡಿ ಬಡ ಕ್ಷಕಿದಾರರಿಗೆ ಶೀಘ್ರ ನ್ಯಾಯದಾನಕ್ಕೆ ಲೋಕ್ ಅದಾಲತ್ ತುಂಬಾ ಸಹಕಾರಿಯಾಗಲಿದೆ. ಹಿಂದಿನ ಲೋಕ್ ಅದಾಲತ್ ಪ್ರಕರಣಗಳಲ್ಲಿ ರಾಜಿ ಸಂಧಾನದ ಮೂಲಕ ಬಹಳಷ್ಟು ವ್ಯಾಜ್ಯಗಳನ್ನು ಇತ್ಯರ್ಥಪಡಿಸಲಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಕೋರ್ಟ್ ಕಲಾಪಗಳು ಇ-ಮೋಡ್‍ಗೆ ವಾಲಿದ್ದು, ವಕೀಲರು ಮತ್ತು ಕಕ್ಷಿದಾರರು ಸಹಕರಿಸುವುದರ ಜೊತೆಗೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸೆಪ್ಟೆಂಬರ್ 18 ವರೆಗೆ ಅರ್ಜಿ ಸಲ್ಲಿಸಬಹುದು: ಇತ್ತ ಕಲಬುರಗಿಯಿಂದ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ ಕಲಬುರಗಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಆರ್.ಜೆ. ಸತೀಷ ಸಿಂಗ್ ಮಾತನಾಡಿ ಕಲಬುರಗಿ ಜಿಲ್ಲಾ ನ್ಯಾಯಾಲಯದಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಬಹುದಾದ 14746 ಪ್ರಕರಣಗಳ ಪೈಕಿ ಪ್ರಸ್ತುತ 2458 ಪ್ರಕರಣಗಳನ್ನು ಇತ್ಯರ್ಥಕ್ಕೆ ಗುರುತಿಸಲಾಗಿದೆ. ಲೋಕ್ ಅದಾಲತ್‍ನಲ್ಲಿ ಪ್ರಕರಣ ಇತ್ಯರ್ಥಕ್ಕಾಗಿ ಸೆ.18ರ ವರೆಗೂ ಕಕ್ಷಿದಾರರು ಜಿಲ್ಲಾ ಅಥವಾ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದು. ಸುಮಾರು 7000ಕ್ಕೂ ಹೆಚ್ಚಿನ ಅರ್ಜಿಗಳು ಲೋಕ್ ಅದಾಲತ್‍ನಲ್ಲಿ ಬರುವ ನಿರೀಕ್ಷೆ ಇದೆ ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಗೋಮತಿ ರಾಘವೇಂದ್ರ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!