ಶ್ರೀರಂಗಪಟ್ಟಣ: ಶಿಥಿಲಗೊಂಡ ಸೇತುವೆ ಮೇಲೆ ಸಂಚರಿಸುತ್ತಿದ್ದ ಟ್ರಾಕ್ಟರ್ವೊಂದು ನಾಲೆಗೆ ಪಲ್ಟಿಯಾಗಿ ಚಾಲಕ ಸೇರಿದಂತೆ ಮತ್ತೋರ್ವ ಕೂದಲಳೆಯಂತರದಲ್ಲಿ ಅಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.
ತಾಲ್ಲೂಕಿನ ಗಡಿ ಗ್ರಾಮವಾದ ಗಾಮನಹಳ್ಳಿ ದೊಡ್ಡಮುಲಗೂಡು ರಸ್ತೆಯ ತುರಬನೂರು ವಿಸಿ ನಾಲೆ ಬಳಿ ಈ ಘಟನೆ ನಡೆದಿದ್ದು, ಟ್ರಾಕ್ಟರ್ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದ್ದರೆ ಸಣ್ಣ-ಪುಟ್ಟ ಗಾಯಗಳೊಂದಿಗೆ ಚಾಲಕ ಹಾಗೂ ಮತ್ತೋರ್ವ ತುಂಬಿ ಹರಿಯುತ್ತಿದ್ದ ನಾಲೆಯಲ್ಲಿ ಈಜಿ ದಡ ಸೇರಿದ್ದಾರೆ.
ಟ್ರಾಕ್ಟರ್ ಮತ್ತು ಚಾಲಕ ಮಳವಳ್ಳಿ ತಾಲ್ಲೂಕಿನ ಡೊಡ್ಡ ಮುಲಗೂಡು ಗ್ರಾಮದವರಾಗಿದ್ದು, ಕಿರಿದಾದ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟ ಸಾಧ್ಯದ ಜೊತೆಗೆ ಭಾಗಶಹ ಶಿಥಿಲಗೊಂಡಿರುವ ನಾಲೆಯ ಸೇತುವೆಯಿಂದಾಗಿ ಮೇಲಿಂದ ಮೇಲೆ ಈರೀತಿಯ ಅವಘಢಗಳು ಸಂಭವಿಸುತ್ತಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
ಸೇತುವೆ ದುರಸ್ಥಿಗಾಗಿ ಹಲವು ಬಾರಿ ಬನ್ನೂರು ವಿಭಾಗದ ನೀರಾವರಿ ಇಲಾಖೆ ಅಧಿಕಾರಿಗಳಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರಾದ ಶಿವಮಂಜು ಸೇರಿದಂತೆ ಇತರರು ಎಚ್ಚರಿಕೆ ನೀಡಿದ್ದಾರೆ.