ದಿಗಂತ ವರದಿ ಧಾರವಾಡ:
ಸೈಕಲ್ ಕವಿ, ಜನಮನದ ಕವಿ ಹೀಗೆ ಅನೇಕ ಬೀರುದುಗಳ ಮೂಲಕ ಖ್ಯಾತಿ ಪಡೆದ ಡಾ. ವಿ.ಸಿ.ಐರಸಂಗ(91) ಶುಕ್ರವಾರ ಇಹಲೋಕ ತ್ಯಜಿಸಿದ್ದಾರೆ.
ಜೀವನದುದ್ದಕ್ಕೂ ಬಡತನ ಹೊದ್ದು ಬೆಳದ ಅವರು, ಇಳಿಯ ವಯಸ್ಸಿನಲ್ಲೂ ಸೈಕಲ್ ಮೇಲೆಯೇ ಸವಾರಿ ಮಾಡುತ್ತ ತಮ್ಮ ಕಾವ್ಯದ ಪುಸ್ತಕ ಮಾರುತ್ತಿದ್ದರು.
ಸುಮಾರು 50ಕ್ಕೂ ಅಧಿಕ ಕವನ ಸಂಕಲನ ರಚಿಸಿದ ಸಾಹಿತ್ಯ ಕೊಡುಗೆಗೆ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿತ್ತು.
ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಅವರು, ಜಿಲ್ಲಾ ಸಮ್ಮೇಳನಕ್ಕೆ ಸೈಕಲ್ ಸವಾರಿ ಮಾಡುತ್ತಲೇ ಎಲ್ಲರ ಗಮನ ಸೆಳೆದರು.
ನೂರಾರು ಆಶುಕವಿತೆ ಬರೆದ ಅವರು, ಪುಟ್ಟ ಪ್ಯಾಕೇಟ್ನಲ್ಲಿ ಮುದ್ರಸಿ, ಸೈಕಲ್ ಮೇಲೆ ಮಾರುತ್ತಿದ್ದರು. ಧಾರವಾಡ ಆಕಾಶವಾಣಿ ಆಗಾಗ ಇವರ ಕವಿತೆ ಪ್ರಸಾರ ಮಾಡುತ್ತಿತ್ತು.
ಅತ್ಯಂತ ಸರಳ ಜೀವಿಯಾದ ಅವರು 90ರ ಇಳಿಯ ವಯಸ್ಸಿನಲ್ಲಿ ಮಲ್ಲಕಂಬಪಟುವಾಗಿದ್ದರು. ಡಾ. ಐರಸಂಗರ ನಿಧನ ಕಾವ್ಯ ಸಾಹಿತ್ಯಕ್ಕೆ ತುಂಬಲಾರದ ನಷ್ಟವಾಗಿದೆ.
ಜನಮಾನಸದಲ್ಲಿ ‘ಸೈಕಲ್ ಕವಿ’ ಎಂದು ಚಿರಪರಿಚಿತರಾದ ಡಾ.ಐರಸಂಗ ಅವರಿಗೆ ಮಗ, ಮಗಳು, ಮೊಮ್ಮಕ್ಕಳ ಹಾಗೂ ಅಪಾರ ಬಂಧುಗಳು ಇದ್ದಾರೆ. ಅವರ ಅಂತ್ಯಕ್ರಿಯೆ ಶುಕ್ರವಾರ ಹೊಸಯಲ್ಲಾಪೂರದಲ್ಲಿ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.