Tuesday, July 5, 2022

Latest Posts

ಸೈನಿಕ ಕುಟುಂಬದ ಮೇಲಿನ ಹಲ್ಲೆ ಪ್ರಕರಣ| ಮೂವರನ್ನು ಮರು ವಿಚಾರಣೆ ನಡೆಸಿ, ಎಲ್ಲರನ್ನೂ ಬಂಧಿಸಿ: ಕೊಡಗು ಬಿಜೆಪಿ ಒತ್ತಾಯ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಕೊಡಗು:

ಬೋಯಿಕೇರಿ ಸಮೀಪ ನಡೆದ ಸೈನಿಕ ಕುಟುಂಬದ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯಾವುದೇ ಒತ್ತಡಕ್ಕೆ ಮಣ ಯದೆ ಬಿಡುಗಡೆಯಾಗಿರುವ ಆರೋಪಿಗಳನ್ನು ಮರು ವಿಚಾರಣೆಗೆ ಒಳಪಡಿಸಬೇಕು ಮತ್ತು ಎಲ್ಲಾ ಹಲ್ಲೆಕೋರರನ್ನು ಬಂಧಿಸಬೇಕೆಂದು ಕೊಡಗು ಜಿಲ್ಲಾ ಬಿಜೆಪಿ ಒತ್ತಾಯಿಸಿದೆ.
ಪತ್ರಿಕಾ ಹೇಳಿಕೆ ನೀಡಿರುವ ಬಿಜೆಪಿ ಜಿಲ್ಲಾ ವಕ್ತಾರ ಮಹೇಶ್ ಜೈನಿ, ಯೋಧರ ನಾಡಲ್ಲಿ ಯೋಧ ಕುಟುಂಬದ ಮೇಲೆ ನಡೆದಿರುವ ಅಮಾನವೀಯ ಕೃತ್ಯ ಖಂಡನೀಯವೆಂದು ತಿಳಿಸಿದ್ದಾರೆ.
ಯೋಧ ಅಶೋಕ್ ಕುಮಾರ್ ಅವರ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಪಡಿಸಿದ್ದಲ್ಲದೆ ಕಾರಿನಲ್ಲಿದ್ದವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ. ಸುಮಾರು 20 ಮಂದಿಯ ಗುಂಪನ್ನು ಸ್ಥಳಕ್ಕೆ ಕರೆಸಿ ಮಹಿಳೆಯರ ಮೇಲೂ ದೌರ್ಜನ್ಯ ನಡೆಸಿರುವುದಲ್ಲದೆ ಚಿನ್ನಾಭರಣಗಳನ್ನು ದೋಚಿರುವ ಬಗ್ಗೆ ಆರೋಪವಿದೆ.
ದೇಶ ರಕ್ಷಣೆಯಲ್ಲಿ ತೊಡಗಿರುವ ಸೈನಿಕ ಹಾಗೂ ಆತನ ಕುಟುಂಬದ ಮೇಲೆ ನಡೆಸಿರುವ ಗುಂಪು ಹಲ್ಲೆ ದೊಡ್ಡ ಅಪರಾಧವಾಗಿದ್ದು, ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಯಾವುದೇ ಒತ್ತಡಕ್ಕೆ ಮಣಿಯದೆ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್ ಹಾಗೂ ಇತರ ಇಬ್ಬರನ್ನು ಮತ್ತೆ ವಿಚಾರಣೆಗೆ ಒಳಪಡಿಸಿ ಈ ದುಷ್ಕೃತ್ಯದ ಹಿಂದಿನ ಸತ್ಯವನ್ನು ಬಯಲಿಗೆಳೆಯಬೇಕೆಂದು ಒತ್ತಾಯಿಸಿದ್ದಾರೆ.
ತನ್ನ ಕಣ್ಣೆದುರೇ ಪುತ್ರ ಹಾಗೂ ಕುಟುಂಬದ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಕಂಡು ಬೇಸರಗೊಂಡ ಅಶೋಕ್ ಕುಮಾರ್ ಅವರ ತಂದೆ ಕಾರ್ಯಪ್ಪ ಅವರು ಸಮಾಧಾನಪಡಿಸಲು ಮುಂದಾಗಿದ್ದಾರೆ. ಈ ಸಂದರ್ಭ ವಯೋವೃದ್ಧರು ಎನ್ನುವುದನ್ನೂ ನೋಡದೆ ಇವರ ಮೇಲೂ ಹಲ್ಲೆ ನಡೆಸಿ ಗಾಯಗೊಳಿಸಲಾಗಿದೆ ಎಂದು ಆರೋಪಿಸಿರುವ ಮಹೇಶ್ ಜೈನಿ, ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss