ಮಂಗಳೂರು: ದೇಶವನ್ನೇ ಬೆಚ್ಚಿಬೀಳಿಸಿದ್ದ ಸೈನೆಡ್ ಕಿಲ್ಲರ್ ಮೋಹನ್, ಕಾಸರಗೋಡಿನ ಯುವತಿಯ ಅತ್ಯಾಚಾರ, ಕೊಲೆ ಪ್ರಕರಣದಲ್ಲೂ ದೋಷಿ ಎಂದು ಸ್ಥಳೀಯ ನ್ಯಾಯಾಲಯ ತೀರ್ಪು ನೀಡಿದೆ.
ಯುವತಿಯರನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿ, ಸೈನೈಡ್ ನೀಡಿ ಕೊಲೆಗೈದ ಆರೋಪದಲ್ಲಿ ಮೋಹನ್ ಒಟ್ಟು ೨೦ ಪ್ರಕರಣ ಎದುರಿಸುತ್ತಿದ್ದು, 19 ಪ್ರಕರಣಗಳ ವಿಚಾರಣೆ ಈಗಾಗಲೇ ಮುಗಿದಿದೆ. ಈಪೈಕಿ ನಾಲ್ಕು ಪ್ರಕರಣಗಳಲ್ಲಿ ಮರಣ ದಂಡನೆ ಮತ್ತು 15 ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇದೀಗ 20ನೇ ಪ್ರಕರಣದ ತೀರ್ಪು ಬಂದಿದ್ದು, ಜೂನ್ 24 ರಂದು ಶಿಕ್ಷೆಯ ಪ್ರಮಾಣ ಪ್ರಕಟವಾಗುವ ಸಾಧ್ಯತೆಯಿದೆ.
ಈ ಪ್ರಕರಣ ಯಾವುದು?
ಕಾಸರಗೋಡಿನ ಮಹಿಳಾ ಹಾಸ್ಟೆಲ್ ವೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ 25 ವರ್ಷದ ಯುವತಿಗೆ 2009ರಲ್ಲಿ ಮೋಹನ್ ಪರಿಚಯವಾಗಿತ್ತು. ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಮೋಹನ್, ಮೂರು ಬಾರಿ ಆಕೆಯ ಮನೆಗೆ ಭೇಟಿ ನೀಡಿದ್ದ. ಅದಾದ ಬಳಿಕ 2009ರ ಜುಲೈ 8 ರಂದು ಸುಳ್ಯದ ದೇವಸ್ಥಾನಕ್ಕೆ ಹೋಗುವುದಾಗಿ ತಿಳಿಸಿ ಯುವತಿ ಮನೆಯಿಂದ ಬಂದಿದ್ದಳು. ಸುಳ್ಯದಿಂದ ನೇರ ಆಕೆಯನ್ನು ಬೆಂಗಳೂರಿಗೆ ಕರೆದೊಯ್ದಿದ್ದ ಮೋಹನ್, ನಾವು ಮದುವೆ ಆಗಿದ್ದೇವೆ. ಶೀಘ್ರದಲ್ಲೇ ಬರುತ್ತೇವೆ ಎಂದು ಆಕೆಯ ಮನೆಯವರಿಗೆ ನಂಬಿಸಿದ್ದ ಎಂದು ಪೊಲೀಸರು ಆರೋಪಪಟ್ಟಿ ದಾಖಲಿಸಿದ್ದರು.