ಮತ್ತೆ ಬಂತು ಶಿಕ್ಷಕರ ದಿನಾಚರಣೆ. ಕಳೆದು ಹೋದ ನನ್ನ ನೆಚ್ಚಿನ ಗುರುವಿನ ಸಂಪರ್ಕ ಕ್ಕಾಗಿ ಮನಸ್ಸು ಮತ್ತೆ ಹಾತೊರೆಯಿತು. ಸ. ಕಿ.ಪ್ರಾ. ಶಾಲೆ ಜಕ್ಕೊಳ್ಳಿ ಕಣ್ಣೆದುರು ಮಿಂಚಿ ಮರೆಯಾಯಿತು. ಈ ಭಾವಬಂಧದ ಬೆಚ್ವಗಿನ ಲೋಕಕ್ಕೆ ಲೇಖನಿ ಹಿಡಿದು ಸುತ್ತಬೇಕೆನಿಸುತ್ತಿದೆ. ಒಂದಿಷ್ಟು ರಾಶಿ ನೆನಪಿನೊಂದಿಗೆ ಶಾಯಿ ಸೇರಿಸಿ ಸುಂದರ ಬಾಲ್ಯ ಲೋಕ ಸೃಷ್ಟಿಸ ಬೇಕಿದೆ.
ಗುಂಡಗಿನ ಆರಡಿ ಮೈ ಕಟ್ಟು. ನನ್ನದೇ ಬಣ್ಣ, ಕಪ್ಪು ಮೀಸೆ, ಮುಷ್ಟಿಯಷ್ಟು ಕಿವಿಯಲ್ಲಿ ಬೆಳೆದ ನೀಳ ಕೂದಲು. ಮೆತ್ತಗಿನ ಕೈ, ಬಾಯಲ್ಲಿ ಮೆಲುಕಾಡುವ ಬಡೆಸೊಪ್ಪಿನ ಕವಳ. ಮಾರು ದೂರದಲ್ಲಿಯೇ ಮೂಗಿಗೆ ಸೋಕುವದು ಮುಖಕ್ಕೆ ಹಚ್ಚೊಕೊಂಡ ‘ಝೆನ್’ ಪೌಡರ್ ಪರಿಮಳ. ಈ ರಚನೆಯ ವ್ಯಕ್ತಿ ನನ್ನ ಸುರೇಶ್ ಸರ್. ಹದಿನೈದು ವರ್ಷಗಳ ಹಿಂದೆ ನಾನು ಅವರನ್ನು ನೋಡಿದ್ದು. ಇಂದಿಗೂ ಶಾಲೆ ನೆನಪಾದರೆ ಸುರೇಶ್ ಸರ್ ಪಟ ಕಣ್ಣಿಗೆ ಅಚ್ಚೊತ್ತುತ್ತದೆ. ಅವರಲ್ಲಿ ಕಲಿತ ಯಾವ ವಿದ್ಯಾರ್ಥಿಗಳು ಅವರನ್ನು ಮರೆಯಲು ಸಾಧ್ಯವಿಲ್ಲ. ಸದಾ ನೆನಪಿನಲ್ಲಿರುವ ಸಮುದ್ರ ಗಾಂಭೀರ್ಯದ ವ್ಯಕ್ತಿತ್ವ ಅವರದ್ದು.
ಸೋಗೆ ಚಪ್ಪರದ ಮಣ್ಣಿನ ಶಾಲೆಯಲ್ಲಿ ನನ್ನ ಒಂದನೇ ಕ್ಲಾಸ್ ಪ್ರಾರಂಭವಾಗಿದ್ದು. ‘ಸ.ಕಿ.ಪ್ರಾ ಶಾಲೆ ಜಕ್ಕೊಳ್ಳಿ’ ಎಂಬ ತಗಡಿನ ಬೋರ್ಡ್ ಎದುರು ತೂಗಿ ಬಿಡದಿದ್ದರೆ, ಅದನ್ನು ಶಾಲೆ ಎಂದು ಗುರುತಿಸುವುದೇ ಕಷ್ಟ. ೧೧ ಜನ ವಿದ್ಯಾರ್ಥಿಗಳ ಐದನೇ ಕ್ಲಾಸಿನವರೆಗಿನ ಸಣ್ಣ ಶಾಲೆ. ಅಕ್ಕ ನನಗಿಂತ ಮೂರು ವರ್ಷ ದೊಡ್ಡವಳು. ಅವಳು ಅದೇ ಶಾಲೆಯಲ್ಲಿ ಕಲಿಯುತ್ತಿದ್ದಿದ್ದು. ನನಗೆ ಅ ದಿಂದ ಎ’ ವರೆಗೆ ಕಲಿಸಿದ್ದು ಅಜ್ಜ. ‘ಏ’ ದಿಂದ ಸುರೇಶ್ ಸರ್ ಅಡಿಯಲ್ಲಿ ಪ್ರಾರಂಭವಾದ ಕಲಿಕೆ ಎರಡನೇ ತರಗತಿಯ ಕೊನೆಯಲ್ಲಿ ಅಪ್ಪನ ಹೆಸರನ್ನು ಇಂಗ್ಲೀಷ್ ನಲ್ಲಿ ಅರ್ದ ಬರೆಯುವುದು ಕಲಿಯುವ ಹೊತ್ತಿಗೆ ಅಂತ್ಯವಾಗುತ್ತದೆ. ಅಪ್ಪನ ರಾಮಕೃಷ್ಣ ಹೆಸರಲ್ಲಿ ರಾಮ ಬರೆಯುವುದನ್ನು ಇಂಗ್ಲೀಷ್ ನಲ್ಲಿ ಕಲಿತಿದ್ದು ಎರಡನೇ ತರಗತಿಯಲ್ಲಾದರೆ ಕೃಷ್ಣ ಕಲಿತಿದ್ದು ಆರನೇ ತರಗತಿಯಲ್ಲಿ.
ನನಗೆ ಸುರೇಶ್ ಸರ್ ಬಹಳ ಇಷ್ಟ. ಅದಕ್ಕಿಂತ ಜಾಸ್ತಿ ಭಯ. ಪಠ್ಯ ವಿಷಯದಲ್ಲಿ ಶಿಸ್ತು ಇಲ್ಲದಿದ್ದರೆ ಸರ್ ಇಂದ ಚೆನ್ನಾಗಿ ಬರೆ ಬೀಳುತ್ತಿತ್ತು. ಶಾಲೆ ಮುಗಿಯಲು ಒಂದು ತಾಸು ಮೊದಲು ಬಾಯಿಪಠ ಮಗ್ಗಿ ದಿನಾ ಒಬ್ಬೊಬ್ವರು ಹೇಳಿಕೊಡಬೇಕಿತ್ತು. ನನ್ನ ಪಾಳಿಯ ದಿನ ಪ್ರತಿಸಲಿ ತಪ್ಪು ಹೇಳಿ ಹಸಿರು ಹಗ್ಗದಲ್ಲಿ ಹೊಡೆತ ತಿನ್ನುತ್ತಿದ್ದೆ. ಅಕ್ಕನ ಪುಸ್ತಕದ ಮಂತ್ರಿ ಪಾಠದ ಹಾಳೆ ಹರಿದಾಗಂತು ಬಿಸಿಲಲ್ಲಿ ಎರಡು ತಾಸು ನಿಲ್ಲಿಸಿದ್ದರು. ಪಟ್ಟಿ, ಪುಸ್ತಕಕ್ಕೆ ಎಷ್ಟು ಸಾರಿ ಸರ್ ಬೈಂಡ್ ಹಾಕಿ ಕೊಟ್ಟರು ಕಿತ್ತು ಕೊಂಡು ಕಿವಿಹಿಂಡಿಸಿಕೊಳ್ಳುತ್ತಿದ್ದೆ. ಅಕ್ಕನಿಗೆ ಅಕ್ಕ ಎನ್ನದೇ ಹೆಸರಿಟ್ಟು ಕರೆದು ಸರಿಯಾಗಿ ಬೈಸಿಕೊಂಡ ಮೇಲೆ ಅಕ್ಕ ಎಂಬುದು ರೂಢಿ ಮಾಡಿಕೊಂಡೆ.
ಪ್ರತಿ ಶನಿವಾರ ಸಾಲಾಗಿ ಬಂದು ಕೈ ಬೆರಳಿನ ಲಟ್ಟಿಗೆ ತೆಗೆಸಿಕೊಳ್ಳಬೇಕಿತ್ತು, ಶನಿವಾರವೆಂದರೆ ನನಗೆ ಯಮಯಾತನೆ. ಗುರವಾರ ಸರ್ ಎಲ್ಲರದ್ದು ಉಗುರು ನೋಡುತ್ತಿದ್ದರು. ಉಗುರು ಬಿಟ್ಟರೆ ಸ್ಕೆಲ್ ನಲ್ಲಿ ಕೈ ಮೇಲೆ ಹೊಡೆತ ಬೀಳುತ್ತಿತ್ತು. ಒಮ್ಮೆ ನನ್ನ ಉಗುರು ತುಂಬ ಕೆಸರಾಗಿತ್ತು. ಹಿಂದಿನ ದಿನ ಗದ್ದೆಯಲ್ಲಿ ಮಣ್ಣು ಆಡಿದ್ದ ಕುರುಹು ಉಗುರಿನಲ್ಲಿತ್ತು. ಆದರೆ ಸರ್ ನನಗೆ ಹೊಡೆಯದೆ ಅಲ್ಲೆ ಇದ್ದ ಅವರ ಮನೆಗೆ ಕರೆದುಕೊಂಡು ಹೋಗಿ ಸೋಪ್ ಹಾಕಿ ಕೈ ತೊಳೆಸಿ ಮತ್ತೊಮ್ಮೆ ಹೀಗೆ ಕೊಳೆ ಆದರೆ ಹೊಡೆತ ಬೀಳುತ್ತದೆಂದು ಎಚ್ಚರಿಸಿದ್ದರು. ಸಮಯಕ್ಕೆ ಸರಿಯಾಗಿ ಬರದಿದ್ದರೆ ಒಂಟಿ ಕಾಲಲ್ಲಿ ನಿಲ್ಲ ಬೇಕಿತ್ತು. ಇದೊಂದು ಶಿಕ್ಷೆ ನಾನು ಅನುಭವಿಸಲಿಲ್ಲ ಎಲ್ಲರಿಗಿಂತ ಮೊದಲೇ ಶಾಲೆಯಲ್ಲಿರುತ್ತಿದ್ದೆ.
ಸಣ್ಣ ಪಟ್ಟಿಯಲ್ಲಿ ದಿನವು ‘ನಾನು ಮಾಡಿ ಒಂದು ಒಳ್ಳೆಯ ಕೆಲಸ’ ಬರೆಯ ಬೇಕಿತ್ತು. ಮೇಲೆ ದೇವರು ನೋಡುತ್ತಿರುತ್ತಾನೆ . ಸುಳ್ಳು ಬರೆದರೆ ಶಾಪ ಕೊಡುತ್ತಾನೆಂದು ಹೆದರಿಸಿದ್ದರಿಂದ ರಸ್ತೆಯಲ್ಲಿದ್ದ ಕಲ್ಲಾದರು ಪಕ್ಕಕ್ಕೆ ಹಾಕಿ ನಾನು ಮಾಡಿದ ಒಳ್ಳೆಯ ಕೆಲಸವೆಂದು ಬರೆಯುತ್ತಿದ್ದೆ. ಪರೀಕ್ಷೆಯಲ್ಲಿ ಶಾಲೆಗೆ ಹೆಚ್ಚು ಅಂಕ ಪಡೆದವರಿಗೆ ಸರ್ ಪ್ರೈಸ್ ಕೊಡುತ್ತಿದ್ದರು. ಒಮ್ಮೆ ಅಕ್ಕ ಹೆಚ್ಚು ಅಂಕ ಗಳಿಸಿ ಬಣ್ಣದ ಪೆನ್ನಸ್ಸೀಲ್ ಗಳಿಕೊಂಡಳು. ನನಗೂ ಬೇಕು ಎಂದು ಅಕ್ಕನೊಟ್ಟಿಗೆ ಜಗಳವಾಡಿದ್ದೆ. ಇಡೀ ದಿನ ಅತ್ತಿದ್ದೆ. ಮರುದಿನ ಇದು ಸರ್ ಗೆ ಗೊತ್ತಾಗಿ ಅಂತಹದೇ ಬಣ್ಣದ ಪೆನ್ನಸ್ಸಿಲ್ ಕೊಟ್ಟು, ಮುಂದಿನ ಪರೀಕ್ಷೆಯಲ್ಲಿ ನೀನು ಫಸ್ಟ್ ಬರದಿದ್ದರೆ ಇದೆಲ್ಲವನ್ನೂ ವಾಪಸ್ ತೆಗೆದುಕೊಳ್ಳುತ್ತೇನೆ ಎಂದಿದ್ದರು.
ಸರ್ ವಾಪಸ್ಸ್ ತಗೆದುಕೊಳ್ಳುತ್ತಾರೆ ಎಂಬ ಹೆದರಿಕೆಗೆ ಪರೀಕ್ಷೆ ಚನ್ನಾಗಿ ಬರೆದು ಮೂರೂ ವಿಷಯಕ್ಕು ನೂರಕ್ಕೆ ನೂರು ತೆಗೆದುಕೊಂಡಿದ್ದೆ. ಚಿತ್ರಕಲೆ ಪರೀಕ್ಷೆಯಲ್ಲಿ ಸುಂದರವಾಗಿ ಚಿತ್ರ ಬಿಡಿಸಿದವರಿಗೆ ಪರಿಮಳದ ಪೆನ್ ಕೊಡುತ್ತಿದ್ದರು, ಐದು ವರ್ಷವು ಪೆನ್ ಅಕ್ಕನದೇ ಪಾಲಾಗುತ್ತಿತ್ತು. ಸರ್ ಮನೆಯಲ್ಲಿ ಕುಳಿತು ಹೊಮ್ ವರ್ಕ್ ಮುಗಿದ ಮೇಲೆ ಮನೆಗೆ ಹೋಗಬೇಕಿತ್ತು. ನಾವು ಬ್ರಾಹ್ಮಣರು ನಮ್ಮದೇ ಜಾತಿ ಮೇಲೆಂದು ನಾನು ಹಿರಿಯರಿಗೆಲ್ಲ ಹೆಸರಿಟ್ಟೆ ಏಕವಚನದಲ್ಲೇ ಮಾತಾಡುತ್ತಿದ್ದೆ. ಆದರೆ ಸರ್ ಹಿರಿಯರಿಗೆ ಹೆಸರಿಟ್ಟು ಮಾತಾಡಬಾರದು ಅಕ್ಕ, ಅಣ್ಣ ಎಂದೇ ಕರೆಯಬೇಕು ಹೇಳಿಕೊಟ್ಟಿದ್ದರು. ಅದನ್ನು ಇಂದಿಗೂ ಮುಂದುವರೆಸಿಕೊಂಡಿದ್ದೇನೆ.
ಐದನೇ ತರಗತಿಯವರ ಬೀಳ್ಕೊಡುಗೆ ಸಮಾರಂಭ ಮುಗಿದು ನನ್ನ ಒಂದನೇ ಕ್ಲಾಸ್ ಮುಗಿಯುವ ಹೊತ್ತಿಗೆ ಹೊಸ ಶಾಲೆ ಕಟ್ಟಿ ಮುಗಿದಿತ್ತು. ಆಗ ನಮಗೆ ಬೇಸಿಗೆ ರಜೆ ಪ್ರಾರಂಭವಾಗಿತ್ತು. ಆದರೆ ಸರ್ ರಜೆಯಲ್ಲಿ ಊರಿಗೆ ಹೋಗದೆ ಒಬ್ಬರೇ ಶಾಲೆಗೆ ಸುಣ್ಣ ಬಣ್ಣ ಮಾಡಿದ್ದರು. ಅದ್ಭುತವಾಗಿ ಗೋಡೆಗಳ ಮೇಲೆ ಪ್ರಾಣಿ, ಪಕ್ಷಿ ಚಿತ್ರ, ಶಾಲೆ ಹೊರಗೆ ಭಾರತ, ಕರ್ನಾಟಕ ನಕಾಶೆ ಬಿಡಿಸಿದ್ದರು. ರಾಷ್ಟ್ರ ನಾಯಕರ ಹೆಸರು, ಗಾದೆ ಮಾತು, ರಗಸದ ಅ, ಸಣ್ಣ ಸಣ್ಣ ಕಥೆಗಳು ಎಲ್ಲವನ್ನು ಬಣ್ಣ ಬಣ್ಣವಾಗಿ ಬರೆದು ಶಾಲೆಯನ್ನು ಮಾಹಿತಿಯ ಖಣಜವಾಗಿಸಿದ್ದರು. ಎರಡನೇ ಕ್ಲಾಸ್ ಗೆ ಬರುವ ಹೊತ್ತಿಗೆ ಹೊಸ ಶಾಲೆ. ಈಗ ತಗಡಿನ ಬೋರ್ಡ್ ಇರಲಿಲ್ಲ. ಕೆಂಪು ಬಣ್ಣದಲ್ಲಿ ದೊಡ್ಡದಾಗಿ ಬರಿತ್ತು ಸ.ಕಿ.ಪ್ರಾ.ಶಾಲೆ ಜಕ್ಕೊಳ್ಳಿ.
ಒಂದು ದಿನ ಸರ್ ಐದನೇ ತರಗತಿಯವರಿಗೆ ಪುಣ್ಯಕೋಟಿ ಕಥೆ ಹೇಳುತ್ತಿದ್ದರು. ಕಥೆ ಕೇಳಿ ನಾನು ಬಿಕ್ಕಿ ಬಿಕ್ಕಿ ಅತ್ತಿದ್ದೆ. ಎದೆಗವಚಿಕೊಂಡು ಸಮಾಧಾನ ಮಾಡಿ ಪೆದ್ದಗುಂಡನ ಕಥೆ ಹೇಳಿ ನಗಿಸಿದ್ದರು. ನಾನು ಪ್ರತಿಭಾಕಾರಂಜಿಯಲ್ಲಿ ಕನ್ನಡ ಕಂಠಪಾಟದಲ್ಲಿ ಪ್ರಥಮ ಸ್ಥಾನ ಪಡೆದಾಗ ದಾಳಿಂಬೆಹಣ್ಣು ಕೊಡಿಸಿದ್ದರು. ಕ್ರಿಕೆಟ್ ಆಡುವಾಗ ಬಿದ್ದು ಪೆಟ್ಟು ಮಾಡಿಕೊಂಡಾಗ ಮನೆವರೆಗೆ ಕೂಸುಮರಿ ಮಾಡಿಕೊಂಡು ಬಿಟ್ಟುಹೊಗಿದ್ದರು. ಪ್ರತಿ ಬೇಸಿಗೆಯಲ್ಲೂ ಪಿಕ್ ನಿಕ್ ಗೆ ಕರೆದುಕೊಂಡು ಹೋಗುತ್ತಿದ್ದರು. ಊರವರಿಗೆಲ್ಲ ಭಾಗವಹಿಸಲು ಅವಕಾಶ ಕೊಟ್ಟು ಗ್ಯಾದರಿಂಗ್ ಮಾಡಿದ್ದರು. ನಾಟಕ, ಡಾನ್ಸ್, ಹಾಡು ರಾತ್ರಿಯ ಒಂದರವರೆಗೂ ಕಾರ್ಯಕ್ರಮ ನಡೆದಿತ್ತು. ನಾನು ಡಾನ್ಸ ಮಾಡಿದ್ದೆ, ಅಜ್ಜ ಹೇಳಿಕೊಟ್ಟ ಅರವತ್ತು ಸಂವತ್ಸರ ಪಟ ಪಟ ಹೇಳಿದ್ದೆ. ಎಷ್ಟೋ ಜನ ಹೆಸರೆ ಕೇಳಿರದ ನನ್ನ ಬಡ ಊರಿನ ಗ್ಯಾದರಿಂಗ್ ಸುದ್ದಿ ಪೇಪರ್ ನಲ್ಲಿ ಬಂದಿತ್ತು. ಈಡೀ ಊರು ಸುರೇಶ ಸರ್ ನ್ನು ಹೆಮ್ಮೆಯಿಂದ ನೋಡಿತ್ತು.
ಅಗಸ್ಟ್ ೧೫, ಜನವರಿ ೨೬ ಬಂದರೆ ಸರ್ ಗೆ ದೊಡ್ಡ ಹಬ್ಬ. ತಿಂಗಳಿರುವಾಗಲೇ ಸಾಂಸ್ಕೃತಿಕ ಕಾರ್ಯಕ್ರಮ ತಯಾರಿ ಮಾಡಿಸುತ್ತಿದ್ದರು. ಶಾಲೆ ಅಂಗಳಕ್ಕೆ ಸಗಣಿಯಿಂದ ಸಾರಿಸಬೇಕಿತ್ತು. ಈಡೀ ಶಾಲೆಗೂ ಮಾವಿನ ತೋರಣ, ಬಾಗಿಲಲ್ಲಿ ಅಕ್ಕನ ದೊಡ್ಡ ರಂಗೋಲಿ, ರಾಷ್ಟ್ರ ನಾಯಕರಿಗೆ ಹೂವಿನ ಮಾಲೆ. ಆದಿನ ಏಳು ಗಂಟೆಗೆ ಶಾಲೆಯಲ್ಲಿ ಇರಬೇಕಾಗುತ್ತಿತ್ತು. ಪರಿಸರದಿನಾಚರಣೆಯಂದು ಸರ್ ಶಾಲೆ ಸುತ್ತ ಅಕೇಶಿಯಾ ಗಿಡ, ಹೂವಿನ ಗಿಡ ನೆಡಿಸಿದ್ದರು, ದಿನ ನಮ್ಮೊಂದಿಗೆ ಸರ್ ಗಿಡಗಳಿಗೆ ನೀರು ಹಾಕುತ್ತಿದ್ದರು.
ನನ್ನ ಎರಡನೇ ತರಗತಿ ಅರ್ಧ ಮುಗಿಯುವ ಹೊತ್ತಿಗೆ ಸರ್ ನಮ್ಮ ಊರನ್ನ ಬಿಟ್ಟು ಹೊರಟು ನಿಂತಿದ್ದರು. ಇಲ್ಲಿಯವರೆಗೆ ಅವರಿಂದ ತುಂಬಾ ಕಲಿತಿದ್ದೆ. ೧೭ ರವರೆಗೆ ಮಗ್ಗಿ, ‘ಏ’ ದಿಂದ ‘ಜ್ಞ’ ವರೆಗೆ. ಕ,ಕಾ ಬಳ್ಳಿ, ಮನೆಯವರೆಲ್ಲರ ಹೆಸರು ಬರೆಯುವುದು. ಅಪ್ಪನ ಹೆಸರನ್ನು ಇಂಗ್ಲೀಷ್ ನಲ್ಲಿ ಅರ್ಧ ಬರೆಯುವುದು ಕಲಿತಿದ್ದೆ. ಉಗುರು ಸ್ವಚ್ಛವಾಗಿ ಇಟ್ಟುಕೊಳ್ಳುತ್ತಿದ್ದೆ ಆದರೆ ಇನ್ನೂ ಅವರಿಂದ ಕಲಿಯುವುದು ಬಹಳವಿತ್ತು. ಯಾರೋ ಸರ್ ಗೆ ಕ್ಷುಲ್ಲಕ ಕಾರಣಕ್ಕೆ ಹೊಡೆದು ಬೆದರಿಸಿದ್ದರು. ಹೆದರಿ ರಾತ್ರೊ ರಾತ್ರಿ ಊರಿಗೆ ಹೊರಟು ನಿಂತಿದ್ದರು. ಊರಿಗೆ ಊರೆ ಅವರನ್ನು ಕಳುಹಿಸಲು ಬಂದಿತ್ತು. ನನ್ನ ಅಕ್ಕನ ಕೆನ್ನೆ ಮುಟ್ಟಿ ಚೆನ್ನಾಗಿ ಓದ್ರಿ ನಿಮ್ಮನ್ನ ನೋಡೊಕೆ ಆಗಾಗಾ ಬರ್ತಿನಿ ಎಂದು ಕೈ ಬೀಸಿ ಹೊರಟು ಹೋದರು.
ಹೊರಟು ಹೋದವರು ಒಂದು ದಿನವು ಬರಲೇ ಇಲ್ಲ. ಹದಿನೈದು ವರ್ಷ ಆಯ್ತು. ಅವರು ಶಾಲೆಗೆ ಹಚ್ಚಿದ ಬಣ್ಣ ಮಾಸಿದೆ. ಗ್ಯಾದರಿಂಗ್, ಪ್ರತಿಭಾಕಾರಂಜಿ, ಸ್ಪೋರ್ಟ್ಸ್, ಪಿಕ್ ನಿಕ್ ಎಲ್ಲ ಸುರೇಶ್ ಸರ್ ಕಾಲಕ್ಕೆ ಮುಗಿದು ಹೋಯಿತು. ಅಕೇಶಿಯಾ ಗಿಡ ಮರವಾಗಿದೆ. ಗಿಡಗಳು ಹೂವು ಬಿಡುತ್ತಿವೆ. ಅವರು ಹೋದ ಮೇಲೆ ಆ ಶಾಲೆಗೆ ಜೀವವೆ ಇರಲಿಲ್ಲ. 11 ಜನ ವಿದ್ಯಾರ್ಥಿಗಳಿದ್ದ ಶಾಲೆಯಲ್ಲಿ 5 ಜನ ಉಳಿದರು. ವರ್ಷಕ್ಕೊಮ್ಮೆ ಹೊಸ ಶಿಕ್ಷಕರು ಬರುತ್ತಿದ್ದರು. ಅವರು ಕಲಿಸಿದ್ದೆ ಪಾಠ. ಹೇಗೋ ಐದನೇ ತರಗತಿ ಮುಗಿಸಿ ಹೊರ ಬಿದ್ದೆ. ಎಷ್ಟೋ ಶಿಕ್ಷಕರು ನನ್ನ ಕಲಿಕೆಯ ಪಾತ್ರದಾರಿಗಳು, ಆದರೆ ಸುರೇಶ ಸರ್ ಮಾತ್ರ ನನ್ನ ಭವಿಷ್ಯದ ನಾಯಕರು.
-ಕಾವ್ಯಾ ಜಕ್ಕೊಳ್ಳಿ