ಉಡುಪಿ: ಕಡಿಯಾಳಿಯ ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮತ್ತು ಆಸರೆ ಟ್ರಸ್ಟ್ನಿಂದ ಸಿಟಿ ಬಸ್ಸು ಮಾಲಕರ ಸಹಕಾರದಲ್ಲಿ ಆರು ದಿನಗಳ ಕಾಲ ಉಚಿತ ಸಿಟಿ ಬಸ್ಸು ಸೇವೆ ಮೇ 25ರಿಂದ ಆರಂಭಿಸಲಾಗುತ್ತದೆ ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಗದಿತ 7 ಮಾರ್ಗದಲ್ಲಿ 12 ಬಸ್ಸುಗಳನ್ನು ಓಡಿಸಲಾಗುತ್ತದೆ. ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಬಸ್ಸುಗಳು ಸಂಚರಿಸಲಿವೆ ಎಂದರು.
ಬಸ್ಸುಗಳಲ್ಲಿ ಚಾಲಕರು ಮಾತ್ರ ಇರುತ್ತಾರೆ. ಗಣೇಶೋತ್ಸವ ಸಮಿತಿ ಕಾರ್ಯಕರ್ತರು ಮತ್ತು ಬಿಜೆಪಿ ಕಾರ್ಯಕರ್ತರು ನಿರ್ವಾಹಕರಾಗಿ ಸೇವೆ ಸಲ್ಲಿಸಲಿದ್ದಾರೆ. ಪ್ರಯಾಣಿಕರು ಮುಂದಿನ ಬಾಗಿಲಿನಿಂದ ಹತ್ತಿ ಹಿಂದಿನ ಬಾಗಿಲಿನಿಂದ ಇಳಿಯಬೇಕು. ಇಡೀ ಬಸ್ಸುಗಳನ್ನು ಸ್ಯಾನಿಟೈಸರ್ ಮಾಡಲಾಗುತ್ತದೆ. ಒಂದು ಬಸ್ಸಿನಲ್ಲಿ 30 ಮಂದಿ ಪ್ರಯಾಣಿಕರಿಗೆ ಪ್ರಯಾಣಿಸಲು ಅವಕಾಶ ಇರಲಿದೆ ಎಂದು ತಿಳಿಸಿದರು.
ಸಿಟಿ ಬಸ್ಸು ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಸಿಟಿ ಬಸ್ಸು ಮಾಲಕರ ಸಂಘದಿಂದ ಚಲೋ ಟ್ರಾವೆಲ್ ಕಾರ್ಡ್ ವಿತರಿಸಲಾಗುತ್ತದೆ. ಮೇ 31ರ ವರೆಗೆ ಅದು ಉಚಿತವಾಗಿರಲಿದೆ. ಮುಂದೆ ನಿರ್ವಾಹಕರು ಟಿಕೆಟ್ ಕೊಡುವುದು, ದುಡ್ಡು ಕೊಡುವುದು, ಇದರಿಂದ ಸೋಂಕು ಹರಡುತ್ತದೆ ಎನ್ನುವ ಆತಂಕ ಇರುವುದಿಲ್ಲ. ಚಲೋ ಕಾರ್ಡ್ ಅನ್ನು ಟಿಕೆಟಿಂಗ್ ಮೆಷಿನ್ ಗೆ ತೋರಿಸಿದರೆ ಸಾಕಾಗುತ್ತದೆ. ಆದ್ದರಿಂದ ಸಾರ್ವಜನಿಕರು ಕೋವಿಡ್ ಭೀತಿಗೊಳಗಾಗದೇ ನಿರ್ಭಯವಾಗಿ ಸಾರ್ವಜನಿಕ ಸಾರಿಗೆ ಬಸ್ಸುಗಳಲ್ಲಿ ಸಂಚರಿಸಬೇಕು ಎಂದು ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ, ಸಿಟಿ ಬಸ್ಸು ಮಾಲಕರ ಸಂಘದ ಪದಾಧಿಕಾರಿಗಳಾದ ಸಂದೀಪ್, ಗಣನಾಥ ಹೆಗ್ಡೆ, ಚಂದನ್, ವಾದಿರಾಜ್ ಮೊದಲಾದವರಿದ್ದರು.