ಮಡಿಕೇರಿ: ಪತಿಯಿಂದಲೇ ಪತ್ನಿಯ ಹತ್ಯೆ ನಡೆದಿರುವ ಸಂಶಯ ವ್ಯಕ್ತವಾಗಿದ್ದು, ಸೋಮವಾರಪೇಟೆ ತಾಲೂಕಿನ ಆಲೂರುಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಲಂಬಿ ಗ್ರಾಮದಲ್ಲಿ ಎರಡು ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಅರಣ್ಯ ಹಕ್ಕು ಕಾಯ್ದೆಯ ಮೂಲಕ ಜಮೀನು ಮಂಜೂರು ಮಾಡಿ ಸರ್ಕಾರದಿಂದಲೇ ಮನೆ ನಿರ್ಮಿಸಿಕೊಟ್ಟಿರುವ ಮಾಲಂಬಿ ಗ್ರಾಮದ ಜೇನುಕುರುಬರ ಕುಮಾರ ಎಂಬಾತನ ಪತ್ನಿ, ನಾಗಿ (೪೫) ಎಂಬಾಕೆಯ ಮೃತದೇಹ ಶನಿವಾರ ಬೆಳಗ್ಗೆ ಕಂಡುಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಮಾರ ಮತ್ತು ನಾಗಿ ಇಬ್ಬರೂ ಮಾಲಂಬಿ ಗ್ರಾಮದ ಮನೆಯಲ್ಲಿ ಕಳೆದ ಅನೇಕ ವರ್ಷಗಳಿಂದ ವಾಸವಿದ್ದು, ಮೇ ೧೪ರಂದು ಇವರಿಬ್ಬರ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ಮದ್ಯಪಾನ ಮಾಡಿದ್ದ ದಂಪತಿಯ ನಡುವೆ ಕಲಹ ವಿಕೋಪಕ್ಕೆ ತಿರುಗಿದ್ದು, ಪತಿ ಕುಮಾರ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎಂದು ಸಂಶಯಿಸಲಾಗಿದೆ. ಮನೆಯಲ್ಲಿ ಇಬ್ಬರ ಹೊರತು ಬೇರೆ ಯಾರೂ ಇರಲಿಲ್ಲ. ಇಬ್ಬರು ಪುತ್ರಿಯರನ್ನು ವಿವಾಹ ಮಾಡಿಕೊಡಲಾಗಿದ್ದು, ಬೇರೆಡೆ ನೆಲೆಸಿದ್ದಾರೆ. ಮೇ ೧೪ರ ನಂತರ ನಾಗಿ ಕಾಣದೇ ಇದ್ದ ಸಂದರ್ಭ ಗ್ರಾಮಸ್ಥರಿಗೆ ಸಂಶಯ ಬಂದಿದ್ದು, ಶನಿವಾರ ಮನೆಯ ಬಳಿ ತೆರಳಿದ ಸಂದರ್ಭ ಮೃತದೇಹ ಪತ್ತೆಯಾಗಿದೆ. ಶನಿವಾರ ವಿಷಯ ಬೆಳಕಿಗೆ ಬರುತ್ತಿದ್ದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಶನಿವಾರಸಂತೆ ಠಾಣಾಧಿಕಾರಿ ಕೃಷ್ಣನಾಯಕ್ ಸೇರಿದಂತೆ ಸಿಬ್ಬಂದಿಗಳು ಸ್ಥಳ ಪರಿಶೀಲಿಸಿದ್ದು, ಈ ಸಂದರ್ಭ ಮನೆಯೊಳಗೆ ನಾಗಿಯ ಮೃತದೇಹ ಕಂಡುಬಂದಿದೆ. ತಲೆಯ ಹಿಂಭಾಗ ತೀವ್ರ ಪೆಟ್ಟಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೇ ೧೪ರಂದೇ ಘಟನೆ ನಡೆದಿರುವುದಾಗಿ ಸಂಶಯಿಸಲಾಗಿದ್ದು, ಈ ಎರಡು ದಿನಗಳ ಕಾಲ ಪತಿ ಕುಮಾರ ಮನೆಯ ಸುತ್ತಮುತ್ತಲಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಓಡಾಡಿದ್ದಾನೆ. ಶನಿವಾರ 12 ಗಂಟೆಯವರೆಗೂ ಗ್ರಾಮದಲ್ಲಿದ್ದ ಕುಮಾರ, ಪೊಲೀಸ್ ವಾಹನಗಳು ಆಗಮಿಸಿದ ನಂತರ ತಲೆಮರೆಸಿಕೊಂಡಿದ್ದಾನೆ.
ಪತ್ನಿಯನ್ನು ಕುಮಾರನೇ ಹತ್ಯೆ ಮಾಡಿರಬಹುದು ಎಂಬ ಸಂಶಯ ಬಲವಾಗಿದ್ದು, ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ಅವರ ಮಾರ್ಗದರ್ಶನದಂತೆ ಆರೋಪಿ ಕುಮಾರನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.