Tuesday, July 5, 2022

Latest Posts

ಸೌದಿ ದೊರೆ ಜೊತೆ ದೂರವಾಣಿ ಸಮಾಲೋಚನೆ ನಡೆಸಿದ ಪ್ರಧಾನಿ ಮೋದಿ

ಉಡುಪಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೌದಿ ಅರೆಬಿಯಾದ ದೊರೆ ಸಲ್ಮಾನ್ ಬಿನ್ ಅಬ್ದುಲ್ಲಾಜೀಜ್ ಅಲ್ ಸೌದ್ ಅವರೊಂದಿಗೆ ದೂರವಾಣಿ ಮೂಲಕ ಸಮಾಲೋಚಿಸಿದ್ದಾರೆ.
ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಎದುರಾಗಿರುವ ಜಾಗತಿಕ ಸ್ಥಿತಿಗತಿ ಕುರಿತಂತೆ ಉಭಯ ನಾಯಕರು ಪರಸ್ಪರ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ.
ಜಿ-20 ಬಳಗದ ಅಧ್ಯಕ್ಷತೆ ವಹಿಸಿಕೊಳ್ಳಲು ಪ್ರಸ್ತುತ ನಡೆಯುತ್ತಿರುವ ಪ್ರಕ್ರಿಯೆಯಲ್ಲಿ ಸೌದಿ ಅರೆಬಿಯಾ ತೋರುತ್ತಿರುವ ನಾಯಕತ್ವದ ಬಗ್ಗೆ ಪ್ರಧಾನಮಂತ್ರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಿ-20ರ ಮಟ್ಟದಲ್ಲಿ ಕೈಗೊಂಡಿರುವ ಕ್ರಮಗಳು ಸಾಂಕ್ರಾಮಿಕ ನಿಯಂತ್ರಿಸುವಲ್ಲಿ ಸಮನ್ವಯದ ಕಾರ್ಯಗಳನ್ನು ಕೈಗೊಳ್ಳಲು ಸಹಾಯಕವಾಗಿವೆ ಎಂದು ಉಭಯ ನಾಯಕರು ಹೇಳಿದ್ದಾರೆ. ಅಲ್ಲದೇ ಜಿ20ರ ಮುಂದಿರುವ ವಿಚಾರಗಳಲ್ಲಿ ಸದ್ಯದ ಪ್ರಮುಖ ಆದ್ಯತೆಗಳ ಬಗ್ಗೆ ಸಮಾಲೋಚಿಸಿದ್ದಾರೆ.
ಉಭಯ ನಾಯಕರು ಭಾರತ ಮತ್ತು ಸೌದಿ ಅರೆಬಿಯಾದ ನಡುವಿನ ದ್ವಿಪಕ್ಷೀಯ ಸಂಬಂಧಗಳ ಸ್ಥಿತಿಗತಿ ಕುರಿತು ತೃಪ್ತಿ ವ್ಯಕ್ತಪಡಿಸಿ, ಎಲ್ಲ ವಲಯಗಳಲ್ಲಿ ಸಂಬಂಧಗಳನ್ನು ಮತ್ತಷ್ಟು ಬಲವರ್ಧನೆ ಮಾಡುವ ಬದ್ಧತೆ ಪುನರುಚ್ಛರಿಸಿದ್ದಾರೆ. ಕೋವಿಡ್-19 ಸಾಂಕ್ರಮಿಕ ಸಂದರ್ಭದಲ್ಲಿ ಭಾರತೀಯ ವಲಸಿಗರನ್ನು ರಕ್ಷಿಸಲು ಸೌದಿ ಅರೆಬಿಯಾದ ಅಧಿಕಾರಿಗಳು ಬೆಂಬಲ ನೀಡಿದ್ದಕ್ಕಾಗಿ ಪ್ರಧಾನಮಂತ್ರಿ ಅವರು ದೊರೆ ಸಲ್ಮಾನ್ ಅವರಿಗೆ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ದೊರೆ ಸಲ್ಮಾನ್ ಬಿನ್ ಅಬ್ದುಲ್ಲಾಜೀಜ್ ಅಲ್ ಸೌದ್, ಸೌದಿ ಅರೆಬಿಯಾದ ರಾಜಮನೆತನದ ಎಲ್ಲ ಸದಸ್ಯರು ಹಾಗೂ ಪ್ರಜೆಗಳಿಗೆ ಉತ್ತಮ ಆರೋಗ್ಯ ಲಭಿಸಲಿ ಹಾಗೂ ಒಳ್ಳೆಯದಾಗಲಿ ಎಂದು ಪ್ರಧಾನಮಂತ್ರಿ ಶುಭಾಶಯಗಳನ್ನು ಕೋರಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss