Thursday, August 11, 2022

Latest Posts

ಸ್ಥಗಿತಗೊಂಡಿದ್ದ ಪಿಎಸ್‍ಎಸ್‍ಕೆಗೆ ಮರುಜೀವ ನೀಡಿದ ನಿರಾಣಿ ಸಂಸ್ಥೆ: ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ

ಮಂಡ್ಯ : ಕಳೆದ 5 ವರ್ಷಗಳಿಂದ ಸ್ಥಗಿತಗೊಂಡಿದ್ದ ಮಂಡ್ಯ ಜಿಲ್ಲೆ ರೈತರ ಜೀವನಾಡಿ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಸಕ್ತ ಹಂಗಾಮಿನ ಕಬ್ಬು ಅರೆಯುವ ಆರಂಭವಾಗಿದೆ. ಕಾರ್ಖಾನೆ ಅಧ್ಯಕ್ಷ ಮುರುಗೇಶ್ ಆರ್. ನಿರಾಣಿ ಅವರು ತಾವೇ ಕಬ್ಬು ತುಂಬಿದ ಟ್ರಾಕ್ಟರ್ ಚಾಲನೆ ಮಾಡುವ ಮೂಲಕ ಅಧೀಕೃತವಾಗಿ ಕಾರ್ಖಾನೆಗೆ ಚಾಲನೆ ನೀಡಿದರು.
ಎಂ.ಆರ್.ಎನ್(ನಿರಾಣಿ) ಉದ್ಯಮ ಸಮೂಹ ಸಂಸ್ಥೆಯು ಕಾರ್ಖಾನೆಯನ್ನು ಗುತ್ತಿಗೆಗೆ ಪಡೆದ ಮೇಲೆ 3500 ಟಿಸಿಡಿ ಸಾಮಥ್ರ್ಯವನ್ನು 5000 ಟಿಸಿಡಿಗೆ ಹೆಚ್ಚಿಸುವ ವಿಸ್ತರಣೆ ಕಾರ್ಯವನ್ನು ಸಮರೋಪಾದಿಯಲ್ಲಿ ಮಾಡಲಾಗಿತ್ತು. ರಾಜ್ಯ ಸರ್ಕಾರದ ಜೊತೆ ಎಂ.ಆರ್.ಎನ್ (ನಿರಾಣಿ) ಉದ್ಯಮ ಸಮೂಹ ಸಂಸ್ಥೆಯ ಒಡಂಬಡಿಕೆ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿರದ ಕಾರಣ ಯಾವುದೇ ಬ್ಯಾಂಕುಗಳಿಂದ ಪಿ.ಎಸ್.ಎಸ್.ಕೆ ಗೆ ಹಣಕಾಸಿನ ನೆರವು ಪಡೆಯಲು ಇದೂವರೆಗೆ ಸಾಧ್ಯವಾಗಿಲ್ಲ. ಆದರೂ, ಎಂ.ಆರ್.ಎನ್ (ನಿರಾಣಿ) ಉದ್ಯಮ ಸಮೂಹ ಸಂಸ್ಥೆಯು ರೈತರು ಹಾಗೂ ಕಾರ್ಮಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಖಾನೆ ಪುನರಾರಂಭ ಮಾಡಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಕೇವಲ 60 ದಿನಗಳಲ್ಲಿ, ಸ್ಥಗಿತಗೊಂಡಿದ್ದ ಕಾರ್ಖಾನೆಯ ಯಂತ್ರೋಪಕರಣಗಳನ್ನು ದುರಸ್ತಿಗೊಳಿಸಿ ಸಾಮಥ್ರ್ಯ ವಿಸ್ತರಿಸುವ ಸವಾಲಿನ ಕಾರ್ಯವನ್ನೂ ಯಶಸ್ವಿಯಾಗಿ ಮಾಡಿರುವ ಸಂಸ್ಥೆ, ಪಿ.ಎಸ್‍ಎಸ್.ಕೆ ಪುನರಾರಂಭಕ್ಕೆ ಹಗಲಿರುಳು ಶ್ರಮಿಸಿರುವ ತಂತ್ರಜ್ಞರು, ಅಧಿಕಾರಿಗಳು, ಸಿಬ್ಬಂದಿವರ್ಗ,ಕಾರ್ಮಿಕರು,ಯಂತ್ರೋಪಕರಣಗಳು ಹಾಗೂ ಅಗತ್ಯ ವಸ್ತುಗಳ ಸರಬರಾಜುದಾರರನ್ನೂ ವಿಶ್ವಾಸಕ್ಕೆ ಪಡೆದು ಕಾರ್ಖಾನೆ ಪ್ರಾರಂಭಿಸುವಲ್ಲಿ ಯಶಸ್ವಿಯಾಗಿದೆ.
ಕಾರ್ಮಿಕರು, ಆಡಳಿತ ಮಂಡಳಿಯ ಮುಂದಿಟ್ಟಿರುವ ಎಲ್ಲಾ ಬೇಡಿಕೆಗಳು ನ್ಯಾಯಸಮ್ಮತವಾಗಿದ್ದು, ಈಗಾಗಲೇ ಕಾರ್ಮಿಕರ ಹಿಂದಿನ ವರ್ಷಗಳ ವೇತನ ಪಾವತಿಗಾಗಿ 6ಕೋಟಿ ನೀಡಲಾಗಿದೆ. ಉಳಿದ ಹಣವನ್ನು ಸರ್ಕಾರದ ಒಡಂಬಡಿಕೆ ಪ್ರಕ್ರಿಯೆ ಕಾರ್ಯಗಳು ಪೂರ್ಣಗೊಂಡ 24 ಘಂಟೆಗಳಲ್ಲಿ ಪಾವತಿ ಮಾಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
5 ವರ್ಷಗಳ ಹಿಂದೆ ಕಾರ್ಖಾನೆ ಸ್ಥಗಿತಗೊಂಡಾಗಿನಿಂದ ಇಲ್ಲಿಯವರೆಗೆ ಇದ್ದ ಯಾವ ಸಿಬ್ಬಂದಿಯನ್ನೂ ಕೈಬಿಟ್ಟಿಲ್ಲ ಎಲ್ಲಾ ಸಿಬ್ಬಂದಿಗಳನ್ನು ಮುಂದುವರೆಸಲಾಗಿದೆ. ಪಿ.ಎಸ್.ಎಸ್.ಕೆಯನ್ನು ಆಧುನೀಕರಣಗೊಳಿಸಲು ಅಗತ್ಯವಿದ್ದ ಹೆಚ್ಚಿನ ಸಿಬ್ಬಂದಿ ನೇಮಕಾತಿಯಲ್ಲಿ ಸ್ಥಳೀಯರಿಗೆ ಅವಕಾಶ ನೀಡಲಾಗಿದೆ.
ಇದೀಗ ಕಾರ್ಖಾನೆ ಆರಂಭವಾಗಿದ್ದು, ಪ್ರತಿ ಹದಿನೈದು ದಿನಗಳಿಗೊಮ್ಮೆ ನಿಗದಿಪಡಿಸಿದ ಎಫ್.ಆರ್.ಪಿ ದರದಂತೆ ರೈತರಿಗೆ ಕಬ್ಬಿನ ಹಣ ಪಾವತಿಸಲಾಗುವುದು. ಕಾರ್ಮಿಕರಿಗೆ ಪ್ರತಿ ತಿಂಗಳ ಮೊದಲನೇ ವಾರದಲ್ಲಿಯೇ ವೇತನ ನೀಡಲಾಗುವುದು ಎಂದು ಸಂಸ್ಥೆ ಭರವಸೆ ನೀಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss