Saturday, June 25, 2022

Latest Posts

ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿ ಆಕ್ಸಿಜನ್ ಪ್ಲಾಂಟ್ ಗಳ ನಿರ್ಮಾಣ ಹೊಸ ಹೆಜ್ಜೆ: ಸಚಿವ ಎಂ.ವಿ.ಗೋವಿಂದನ್ ಮಾಸ್ಟರ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ವರದಿ, ಕಾಸರಗೋಡು:

ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿ ಆಕ್ಸಿಜನ್ ಪ್ಲಾಂಟ್ ಗಳ ನಿರ್ಮಾಣ ನೂತನ ಹೆಜ್ಜೆಗಾರಿಕೆ ಎಂದು ಕೇರಳ ಸ್ಥಳೀಯಾಡಳಿತ ಮತ್ತು ಅಬಕಾರಿ ಇಲಾಖೆ ಸಚಿವ ಎಂ.ವಿ.ಗೋವಿಂದನ್ ಮಾಸ್ಟರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾಸರಗೋಡು ಜಿಲ್ಲೆಯ ಚಟ್ಟಂಚಾಲ್ ಕೈಗಾರಿಕಾ ಉದ್ಯಾನದಲ್ಲಿ ಸ್ಥಾಪಿಸಲಾಗುವ ಆಕ್ಸಿಜನ್ ಘಟಕದ ನಿರ್ಮಾಣಕ್ಕೆ ಆನ್ ಲೈನ್ ಮೂಲಕ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಕೋವಿಡ್ ಮೂರನೇ ಅಲೆಯ ಭವಿಷ್ಯವನ್ನು ಆರೋಗ್ಯ ಇಲಾಖೆಯು ತಿಳಿಸುತ್ತಿರುವ ಈ ಅವಧಿಯಲ್ಲಿ ಪ್ರಾಣವಾಯುವಿನ ಅನಿವಾರ್ಯತೆ ಅರಿತುಕೊಂಡು ಕಾಸರಗೋಡು ಜಿಲ್ಲಾ ಪಂಚಾಯತ್ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಾರ್ವಜನಿಕ ವಲಯದಲ್ಲಿ ಆಕ್ಸಿಜನ್ ಘಟಕ ಸ್ಥಾಪಿಸುವ ಕ್ರಮ ಇತರರಿಗೆ ಮಾದರಿಯಾಗಿದೆ ಎಂದವರು ಶ್ಲಾಘಿಸಿದರು.
ರಾಜ್ಯದಲ್ಲಿ 38.5 ಕೋಟಿ ರೂ. ವೆಚ್ಚದಲ್ಲಿ ಒಟ್ಟು 35 ಆಕ್ಸಿಜನ್ ಘಟಕಗಳ ನಿರ್ಮಿಸಲು ಕೇರಳ ಸರಕಾರವು ನಿರ್ಧರಿಸಿದೆ. ದೂರದೃಷ್ಟಿಯೊಂದಿಗೆ ಮುಂದೆ ಬರಬಹುದಾದ ಅಪಾಯಗಳನ್ನು ಮನಗಂಡು ಜಾಗರೂಕತೆ ಕೈಗೊಳ್ಳುವ ಸರಕಾರದ ನೀತಿಯ ದ್ಯೋತಕವಾಗಿ ಈ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಜನರ ಸಹಭಾಗಿತ್ವವನ್ನು ಅವರು ಆಶಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಷಾನವಾಝ್ ಪಾದೂರು ಶಿಲಾಫಲಕ ಅನಾವರಣಗೊಳಿಸಿದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಯೋಜನೆಯ ವರದಿ ವಾಚಿಸಿದರು. ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅವರು ಜಿಲ್ಲಾ ಪಂಚಾಯತ್ ನ ಟೆಲಿ ಮೆಡಿಸಿನ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳಿಗಿರುವ ಆಕ್ಸೀಮೀಟರ್ ವಿತರಣೆಯನ್ನು ಉದುಮ ಶಾಸಕ ಸಿ.ಎಚ್.ಕುಂಞಂಬು ನೆರವೇರಿಸಿದರು. ಜಿಲ್ಲೆಯ ಇತರ ಶಾಸಕರಾದ ಎ.ಕೆ.ಎಂ.ಅಶ್ರಫ್, ಎನ್.ಎ.ನೆಲ್ಲಿಕುನ್ನು , ಇ.ಚಂದ್ರಶೇಖರನ್, ಎಂ.ರಾಜಗೋಪಾಲನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಷಾನವಾಝ್ ಪಾದೂರು ಸ್ವಾಗತಿಸಿ, ಜಿ.ಪಂ. ಕಾರ್ಯದರ್ಶಿ ಪಿ.ನಂದಕುಮಾರ್ ವಂದಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss