ಹೊಸ ದಿಗಂತ ವರದಿ, ಮಂಗಳೂರು:
ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯೊಂದರ ವಾರ್ಡ್ ನ ಬಾತ್ ರೂಮ್ ನಲ್ಲಿ ಮಹಿಳೆ ಸ್ನಾನ ಮಾಡುತ್ತಿದ್ದ ವೇಳೆ ಮೊಬೈಲ್ ಮೂಲಕ ವೀಡಿಯೋ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಮದನಿ ನಗರ ನಿವಾಸಿ ಅಬ್ದುಲ್ ಮುನೀರ್(40) ಬಂಧಿತ ಆರೋಪಿ. ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದ ಸಂಬಂಧಿಕರ ಜತೆಗಿದ್ದ ಮಹಿಳೆ ಸ್ನಾನ ಮಾಡಲು ತೆರಳಿದ್ದ ಸಂದರ್ಭ ಆರೋಪಿ ಮುನೀರ್ ಮೊಬೈಲ್ ಮೂಲಕ ಸ್ನಾನದ ದೃಶ್ಯವನ್ನು ಸೆರೆಹಿಡಿದಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನು ಗಮನಿಸಿದ ಮಹಿಳೆ ಕೂಡಲೇ ಹೊರಬಂದಾಗ, ಆರೋಪಿ ಅಲ್ಲಿಂದ ಪರಾರಿಯಾಗಿದ್ದನೆನ್ನಲಾಗಿದೆ.
ಮಹಿಳೆ ಜ. 20ರಂದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೆತ್ತಿಕೊಂಡ ಉಳ್ಳಾಲ ಪೊಲೀಸರು ಆಸ್ಪತ್ರೆಯ ಸಿಸಿಟಿವಿ ಕ್ಯಾಮರಾದ ದೃಶ್ಯಾವಳಿಗಳ ಮೂಲಕ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಈ ನಡುವೆ ತಲೆಮರೆಸಿಕೊಂಡಿದ್ದ ಆರೋಪಿ ಮುನೀರ್ನನ್ನು ಶುಕ್ರವಾರ ಮನೆ ಸಮೀಪ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.