ಹೊಸದಿಗಂತ ವರದಿ, ಮಂಡ್ಯ:
ಚಿಕ್ಕಬಳ್ಳಾಪುರ ಕ್ರಷರ್ವೊಂದರಲ್ಲಿ ಸಂಭವಿಸಿರುವ ಜಿಲೆಟಿನ್ ಸ್ಪೋಟ ಪ್ರಕರಣ ಸಂಬಂಧ ಒಂದು ವಾರದ ಹಿಂದೆಯೇ ಸ್ಪೋಟಕಗಳನ್ನು ಸಂಗ್ರಹಿಸಿಟ್ಟಿರಬಹುದೆಂಬ ಶಂಕೆ ಇದ್ದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿಲ್ಲ. ಇದು ಈ ಸರ್ಕಾರದ ಆಡಳಿತ ವೈಲ್ಯಕ್ಕೆ ಸಾಕ್ಷಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದರು.
ಶಿವಮೊಗ್ಗ ಜಿಲ್ಲೆಯ ಹುಣಸೋಡು ಬಳಿ ಜಿಲೆಟಿನ್ ಲಾರಿ ಸ್ಪೋಟ ಪ್ರಕರಣದ ನಂತರವೂ ರಾಜ್ಯಸರ್ಕಾರ ಎಚ್ಚೆತ್ತುಕೊಂಡಿಲ್ಲ. ಪರಿಣಾಮ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಅರಣ್ಯ ಪ್ರದೇಶದಲ್ಲಿ ಮತ್ತೊಂದು ಜಿಲೆಟಿನ್ ಸ್ಪೋಟ ಸಂಭವಿಸಿ ಆರು ಮಂದಿ ಮತ್ತೆ ಬಲಿಯಾಗಿದ್ದಾರೆ. ಒಂದು ವಾರದ ಹಿಂದೆಯೇ ಕ್ರಷರ್ ನಡೆಸುತ್ತಿರುವ ಸ್ಥಳದ ಮೇಲೆ ಪೊಲೀಸರು ದಾಳಿ ನಡೆಸಿದ್ದರೆಂಬ ಮಾಹಿತಿ ಇದೆ. ಆಗಲೇ ಸ್ಪೋಟಕಗಳನ್ನು ಸಂಗ್ರಹಿಸಿಟ್ಟಿರಬಹುದೆಂಬ ಅನುಮಾನಗಳಿವೆ ಎಂದೂ ಅಧಿಕಾರಿಗಳೇ ಹೇಳುತ್ತಿದ್ದಾರೆ. ಆಗಲೇ ಎಚ್ಚೆತ್ತುಕೊಂಡು ಕ್ರಷರ್ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದರೆ ದುರಂತವನ್ನು ತಪ್ಪಿಸಬಹುದಿತ್ತು. ಆ ಬದ್ಧತೆಯನ್ನು ಯಾರೊಬ್ಬರೂ ಪ್ರದರ್ಶಿಸಲಿಲ್ಲ. ಅಮಾಯಕ ಜನರ ಜೀವದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಪತ್ರಿಕೆಯೊಂದಿಗೆ ಮಾತನಾಡುತ್ತಾ ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗ ಹುಣಸೋಡು ಜಿಲೆಟಿನ್ ಲಾರಿ ಸ್ಪೋಟ ದುರಂತದ ಬಳಿಕ ಬಿಜೆಪಿ ಸರ್ಕಾರ ಅಕ್ರಮ ಗಣಿಗಾರಿಕೆ ನಡೆಸುವವರ ವಿರುದ್ಧ ಏನು ಕ್ರಮ ಕೈಗೊಂಡಿದೆ. ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಸ್ಥಳಗಳಲ್ಲಿ ಅಮಾಯಕ ಜೀವಗಳು ಬಲಿಯಾಗುತ್ತಲೇ ಇವೆ. ಒಂದಿಬ್ಬರು ಮೃತಪಟ್ಟ ಪ್ರಕರಣಗಳು ಬೆಳಕಿಗೆ ಬರುವುದೇ ಇಲ್ಲ. ದೊಡ್ಡ ಪ್ರಮಾಣದಲ್ಲಿ ಸಾವು-ನೋವುಗಳು ಸಂಭವಿಸಿದ ಪ್ರಕರಣಗಳಷ್ಟೇ ಬೆಳಕಿಗೆ ಬರುತ್ತವೆ. ಸರ್ಕಾರಕ್ಕೆ ಜನಸಾಮಾನ್ಯರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಟೀಕಿಸಿದರು.