ಹೊಸ ದಿಗಂತ ವರದಿ, ಮಂಗಳೂರು:
ಮಂಗಳೂರು ನಗರದ ಹೃದಯಭಾಗದಲ್ಲಿ ಏಕಕಾಲಕ್ಕೆ ವಿವಿಧ ಕಡೆ ಸ್ಮಾರ್ಟ್ ಸಿಟಿ ಕಾಮಗಾರಿ ಆರಂಭಗೊಂಡಿದ್ದು, ಜನಸಾಮಾನ್ಯರು, ವಾಹನ ಸವಾರರು, ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ದುರವಸ್ಥೆಯ ಬಗ್ಗೆ ಕೂಡಲೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸದಿದ್ದರೆ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಹೇಳಿದರು.
ಮನಪಾ ಆಡಳಿತ ಮತ್ತು ಅಧಿಕಾರಿಗಳ ಅನುಭವದ ಕೊರತೆಗೆ ಜನಸಾಮಾನ್ಯರು ಬಲಿಪಶು ಆಗುತ್ತಿದ್ದಾರೆ. ತರಾತುರಿ ಕಾಮಗಾರಿಯ ಹಿಂದೆ ಅನುಮಾನವಿದೆ. ಈ ಅವ್ಯವಸ್ಥೆಯ ಕಾಮಗಾರಿಗೆ ನಗರಪಾಲಿಕೆ ಆಡಳಿತವೇ ನೇರ ಹೊಣೆಯಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಪುರಭವನ ಅಂಡರ್ಪಾಸ್ ಕಾಮಗಾರಿ ಆರಂಭವಾಗಿ ಒಂದೂವರೆ ವರ್ಷವಾಗಿದೆ. ಈ ಮಧ್ಯೆ ಬಂದರು, ಕಾರ್ಸ್ಟ್ರೀಟ್, ಹಂಪನಕಟ್ಟೆಯಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಮಂಗಳೂರು ಹೆಲ್ತ್ ಹಬ್ ಆಗಿದ್ದು, ಕೊರೊನಾದ ಸಂಕಷ್ಟ ಕಾಲದಲ್ಲಿ ನಗರದ ವೆನ್ಲಾಕ್ ಆಸ್ಪತ್ರೆ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗೆ ಪ್ರತಿನಿತ್ಯ ಸಾವಿರಾರು ಮಂದಿ ಬರುತ್ತಿದ್ದು, ಈ ಕಾಮಗಾರಿಯಿಂದ ರೋಗಿಗಳ ಜೀವದ ಮೇಲೆ ಆಡಳಿತ ಆಟವಾಡುತ್ತಿದೆ. ಟ್ರಾಫಿಕ್ ಮಧ್ಯೆ ತುರ್ತು ಸಾಗಬೇಕಾದ ಆಂಬ್ಯುಲೆನ್ಸ್ಗಳು ಪರದಾಡುತ್ತಿವೆ. ಆಡಳಿತದಲ್ಲಿರುವವರು ಜೀವ ತೆಗೆಯುವ ಅಲ್ಲ, ಜೀವವುಳಿಸುವ ಕೆಲಸ ಮಾಡಲಿ ಎಂದರು.
೧೨ವರ್ಷಗಳ ಹಿಂದೆ ೯ಕೋಟಿ ರೂ. ವೆಚ್ಚದಲ್ಲಿ ಕಾರ್ಸ್ಟ್ರೀಟ್ ರಸ್ತೆ ವಿಸ್ತರಣೆ ಮಾಡಿ ಅಭಿವೃದ್ಧಿಪಡಿಸಲಾಗಿತ್ತು. ರಸ್ತೆ ಸುವ್ಯವಸ್ಥೆಯಿರುವಾಗಲೇ ಶಾಸಕರ ತುಘಲಕ್ ದರ್ಬಾರು ನೀತಿಯಿಂದ ಮತ್ತೆ ರಸ್ತೆ ಅಗೆದು ಕಾಂಕ್ರಿಟೀಕರಣ ಮಾಡಿ ಹಣ ಪೋಲು ಮಾಡಲಾಗುತ್ತಿದೆ ಎಂದು ಆರೋಪಿಸಿದರು.